ಚಾಮರಾಜನಗರ: ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಬೆಳೆಯುತ್ತಿರುವ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಒಲಿಯುವ ಮೂಲಕ ಪಕ್ಷದಲ್ಲಿ ಪ್ರಭಾವಿ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ ನಾಯಕನ ಕಾಲದಿಂದಲೂ ಆಪ್ತರಾಗಿರುವ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಧ್ರುವನಾರಾಯಣ ಅವರಿಗೆ ಒಲಿದ ಎರಡನೇ ಜವಾಬ್ದಾರಿ ಇದಾಗಿದೆ. ಈ ಮೊದಲು, ಕೊರೊನಾ ಕಾಲದಲ್ಲಿ ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಲ್ಲೂ ಸೈ ಎನಿಸಿಕೊಂಡಿದ್ದ ಅವರಿಗೆ ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಒಲಿದು ಬಂದಿದೆ.
ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಮೂಲಕ ವಿವಿಧ ಸಮುದಾಯದವರ ಅಭಿವೃದ್ಧಿಗಾಗಿ ಸ್ಪಂದಿಸಿದ ಹಿನ್ನೆಲೆ ವಿವಿಧ ಸಂಸ್ಧೆಯವರು ನಡೆಸಿದ ಸಮೀಕ್ಷೆಯಂತೆ ದೇಶದ ಸಂಸದರಲ್ಲಿ ನಾಲ್ಕನೇ ಸ್ಧಾನ, ಕಾಂಗ್ರೆಸ್ ಸಂಸದರಲ್ಲಿ ಎರಡನೇ ಸ್ಧಾನ, ರಾಜ್ಯದ ಸಂಸದರಲ್ಲಿ ಪ್ರಥಮ ಸ್ಧಾನ ಗಳಿಸುವ ಮೂಲಕ ಅವರು ಗಮನ ಸೆಳೆದಿದ್ದರು.
ಈ ಸುದ್ದಿಯನ್ನೂ ಓದಿ:ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ!
2019ರ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಸೋತಲ್ಲೇ ಗೆಲುವು ಕಾಣಬೇಕು ಎಂಬಂತೆ ಸತತವಾಗಿ ಕಾರ್ಯಕರ್ತರೊಂದಿಗೆ ಒಡನಾಟ ಇಟ್ಟುಕೊಂಡು ಮಾಜಿಯಾದರೂ ಹಾಲಿ ಸಂಸದರಂತೆ ನಿತ್ಯವೂ ಒಂದಲ್ಲ ಒಂದು ಕಡೆ ಕಾಣಿಸಿಕೊಳ್ಳುವ ಮೂಲಕ ಪಕ್ಷದ ಸಂಘಟನೆ ಬಲ ಪಡಿಸುತ್ತಿದ್ದರು. ಅಷ್ಟರಲ್ಲೇ ಕೋವಿಡ್ ಎದುರಾಯಿತು. ಆ ಸಂದರ್ಭ ಕೆಪಿಸಿಸಿಯು ಧ್ರುವನಾರಾಯಣ ಅವರನ್ನು ಆರೋಗ್ಯ ಹಸ್ತ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿತ್ತು. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲೆಡೆ ಸುತ್ತಾಡಿ ಬಹಳ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.