ಕರ್ನಾಟಕ

karnataka

ETV Bharat / state

ಒಂದು ಮತದ ಮೌಲ್ಯ ತೋರಿಸಿದ್ದ ಧ್ರುವನಾರಾಯಣ್.. ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿ ಕಣ್ಮರೆ - ಆರ್ ಧ್ರುವನಾರಾಯಣ್​ ಅಂತ್ಯಕ್ರಿಯೆ

ಒಂದೇ ಮತದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದ ಆರ್​ ಧ್ರುವನಾರಾಯಣ್ ಜೀವನದ ಹಾದಿ ಮುಕ್ತಾಯವಾಗಿದೆ. ರಾಜಕೀಯ ಜೀವನದದಲ್ಲಿ ಎರಡು ಬಾರಿ ಸೋಲು, 2 ಬಾರಿ ಎಂಎಲ್ಎ, ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್​ ನಂಜನಗೂಡು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರು.

dhruvanarayan
ಆರ್​ ಧ್ರುವನಾರಾಯಣ್

By

Published : Mar 11, 2023, 1:24 PM IST

Updated : Mar 11, 2023, 1:54 PM IST

ಚಾಮರಾಜನಗರ: ಮೃದು ಭಾಷಿ, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ವ್ಯಕ್ತಿತ್ವ, ಸದಾ ಅಭಿವೃದ್ಧಿ, ಜನರ ಜೊತೆ ಇರುತ್ತಿದ್ದ ರಾಜಕಾರಣಿ ಎಂದು ಹೆಸರು ಪಡೆದಿದ್ದ ಧ್ರುವನಾರಾಯಣ್​ ಇಡೀ ದೇಶಕ್ಕೆ ಒಂದು ಮತದ ಮೌಲ್ಯವನ್ನು ತೋರಿಸಿಕೊಟ್ಟಿದ್ದರು. 2004 ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿ ಎಂಎಲ್ಎ ಚುನಾವಣೆಗೆ ನಿಂತಿದ್ದ ಧ್ರುವನಾರಾಯಣ್ ಅವರು​ ಕೇವಲ ಒಂದು ಮತದ ಅಂತರದಿಂದ ಪ್ರತಿಸ್ಪರ್ಧಿ ಎ.ಆರ್. ಕೃಷ್ಣಮೂರ್ತಿ ಅವರನ್ನು ಮಣಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು.

ಆರ್​ ಧ್ರುವನಾರಾಯಣ್

ತಾನು ಮತ ಹಾಕದಿದ್ದರೇ ರಾಜ್ಯ ಏನು ಬದಲಾಗಲ್ಲ ಎಂಬ ಮನಸ್ಸಿನ ಜನರಿಗೆ ಒಂದು ಮತದ ಅಂತರದಲ್ಲಿ ವಿಧಾನಸಭೆ ಪ್ರವೇಶಿಸಿ ಮತಕ್ಕಿರುವ ಬೆಲೆಯನ್ನು ಇಡೀ ದೇಶಕ್ಕೆ ಪರಿಚಯಿಸಿದ್ದರು. ಅಂದು ರಾಜ್ಯದಲ್ಲಿ ಅತಿ ಹೆಚ್ಚಿನ ಮತದ ಅಂತರದಿಂದ ಗೆದ್ದ ಕೃಷ್ಣಭೈರೇಗೌಡ ಹಾಗೂ ಕಡಿಮೆ ಮತದ ಅಂತರದಿಂದ ಗೆದ್ದು ಬೀಗಿದ್ದ ಧ್ರುವನಾರಾಯಣ್​ ಅವರಿಬ್ಬರನ್ನೂ ಕರೆದು ಅಂದಿನ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸನ್ಮಾನಿಸಿದ್ದು ಇಂದು ಇತಿಹಾಸ.

ಈಡೇರಲಿಲ್ಲ 3 ನೇ ಬಾರಿ ಎಂಎಲ್ಎ ಆಗುವ ಬಯಕೆ: ಇನ್ನೇನೂ ಕೆಲವೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಸಕಲ‌ ತಯಾರಿಯನ್ನೂ ನಡೆಸಿದ್ದರು. ಅವರಿಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಎಂಬ ವಾತಾವರಣ, ಗೆಲ್ಲುವ ವಿಶ್ವಾಸ ಎರಡೂ ಮನೆ ಮಾಡಿತ್ತು. ಅಷ್ಟರಲ್ಲಾಗಲೇ, ಅವರ ನಿಧನ ಕಾಂಗ್ರೆಸ್​ಗೆ ಬರಸಿಡಿಲನ್ನೇ ಬಡಿಸಿದೆ.

ಇದನ್ನೂ ಓದಿ:ಮಾಜಿ ಸಂಸದ ಆರ್​ ಧ್ರುವನಾರಾಯಣ್​ ಇನ್ನಿಲ್ಲ: ಗಣ್ಯರಿಂದ ಸಂತಾಪ

ಮೊದಲ-ಕೊನೆಯ ಚುನಾವಣೆಯಲ್ಲಿ ಸೋಲು:70-80 ರ ದಶಕದಲ್ಲಿ ವಿದ್ಯಾರ್ಥಿ ಕಾಂಗ್ರೆಸ್‌ ಮೂಲಕ ರಾಜಕೀಯ ಜೀವನ ಆರಂಭಿಸಿ ಬಳಿಕ ರಾಜಶೇಖರಮೂರ್ತಿ ಅವರ ಗರಡಿಯಲ್ಲಿ ಪಳಗಿ 1999 ರಲ್ಲಿ ಬಿಜೆಪಿ ಚಿಹ್ನೆಯಡಿ ಸಂತೇಮರಹಳ್ಳಿ ಕ್ಷೇತ್ರದಿಂದ ಎ.ಆರ್‌. ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಳಿಕ, 2004 ರಲ್ಲಿ ಅದೇ ಕ್ಷೇತ್ರದಿಂದ ಎಆರ್ ಕೆ ಅವರನ್ನು 1 ಮತದ ಅಂತರದಲ್ಲಿ ಸೋಲಿಸಿ ಶಾಸಕರಾದರು. ಸಂತೇಮರಹಳ್ಳಿ ಕ್ಷೇತ್ರ ರದ್ದಾಗಿ ಕೊಳ್ಳೇಗಾಲ ಮೀಸಲು ಕ್ಷೇತ್ರ ಉದಯಿಸಿದ್ದರಿಂದ 2008 ರಲ್ಲಿ ಕೊಳ್ಳೇಗಾಲದಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಅದಾದ ನಂತರ, 2009, 2014 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದ ಧ್ರುವನಾರಾಯಣ್​ 2019 ರಲ್ಲಿ ಎದುರಿಸಿದ್ದ ಲೋಕ ಚುನಾವಣೆಯೇ ಅವರ ಕೊನೆಯ ಚುನಾವಣೆ ಆಗಿತ್ತು.‌ ಮೊದಲ ಹಾಗೂ ಕೊನೆಯ ಚುನಾವಣೆಯಲ್ಲಿ ಸೋಲು ಕಂಡು ವಿಧಿಯಾಟದ ಮುಂದೆಯೂ ಸೋಲು ಅನುಭವಿಸಿ ಅಪಾರ ಅಭಿಮಾನಿಗಳು, ಕಾರ್ಯಕರ್ತರನ್ನು ಬಿಟ್ಟು ಅಗಲಿದ್ದಾರೆ.

ಆರ್​ ಧ್ರುವನಾರಾಯಣ್

ನಂ1 ಸಂಸದ, ಕ್ಷೇತ್ರದಲ್ಲಿ ನಿತ್ಯ ಸುತ್ತಾಟ:ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಧ್ರುವನಾರಾಯಣ್​ ನಂ 1 ಸಂಸದ ಎನಿಸಿಕೊಂಡಿದ್ದರು. ರಾಜ್ಯದ ಸಂಸದರುಗಳ ಪೈಕಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದು, ಸಂಸತ್ತಿನಲ್ಲಿ ಭಾಗಿಯಾಗಿದ್ದು, ಹೆಚ್ಚು ಅನುದಾನ ತಂದ ರಾಜ್ಯದ ಮೊದಲ ಸಂಸದ ಎಂಬ ಹೆಗ್ಗಳಿಕೆ ಇವರದಾಗಿತ್ತು. ಕೃಷಿಯಲ್ಲಿ ಎಂಎಸ್​ಸಿ ಮಾಡಿದ್ದ ಧ್ರುವನಾರಾಯಣ್​ ಅವರು ಚಾಮರಾಜನಗರಕ್ಕೆ ಕೃಷಿ ಕಾಲೇಜನ್ನು ತಂದಿದ್ದರು. ಲಾ ಕಾಲೇಜು ಮಂಜೂರು ಮಾಡಿಸಿದ್ದರು. ವಸತಿ ಶಾಲೆಗಳು, ಇಂಜಿನಿಯರಿಂಗ್ ಕಾಲೇಜು ಹೀಗೆ ಅಭಿವೃದ್ಧಿ ಮೂಲಕ ಜನರ ಮನಸ್ಸಿನಲ್ಲಿ ಉಳಿದ ವಿಶೇಷ ರಾಜಕಾರಣಿ ಆಗಿದ್ದರು.

ಸಂಸದೀಯ ಪಟುವಾಗಿ, ರಾಜಕೀಯ ನಾಯಕನಾಗಿ ತಮ್ಮ ಶ್ರಮ, ಬದ್ಧತೆಯಿಂದ ಹೆಸರು ಮಾಡಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಯ ಡಿ ಕೆ ಶಿವಕುಮಾರ್​ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Last Updated : Mar 11, 2023, 1:54 PM IST

ABOUT THE AUTHOR

...view details