ಚಾಮರಾಜನಗರ: ಮೆಣಸಿಕಾಯಿ ಬೆಳೆದ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿದೆ. ಚಾಮರಾಜನಗರ ತಾಲೂಕಿನ ಹೆಬ್ಬಸೂರಿನಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಕಾರ್ತಿಕ್ ಎಂಬುವರಿಗೆ ಸೇರಿದ ಈ ಜಮೀನಿನಲ್ಲಿ ಮೆಣಸಿಕಾಯಿ ಕೀಳುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರು ಗಿಡಗಳ ನಡುವೆ ಹೆಬ್ಬಾವನ್ನು ಕಂಡರು. ಅಲ್ಲದೆ ಸುಮಾರು ಹೊತ್ತು ಅವರು ಭಯದಲ್ಲೇ ಕಾಲ ಕಳೆದರು.
ಜಮೀನಿನಲ್ಲಿ ಕಾಣಿಸಿಕೊಂಡ ಹೆಬ್ಬಾವು ಕೂಡಲೇ, ಉರಗ ಪ್ರೇಮಿ ಅಶೋಕ್ ಅವರನ್ನು ಕರೆಸಿ ಹಾವನ್ನು ರಕ್ಷಿಸಲಾಯಿತು. ಕಾರ್ಮಿಕರ ಆತಂಕಕ್ಕೆ ಕಾರಣವಾಗಿದ್ದ ಹೆಬ್ಬಾವನ್ನು ರಕ್ಷಿಸಿದ ಅಶೋಕ್ ಅವರು, ಸುವರ್ಣಾವತಿ ಜಲಾಶಯದ ಹಿನ್ನೀರಿನ ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಸುಮಾರು 8 ಅಡಿ ಉದ್ದದ ಹೆಬ್ಬಾವು ಅರಣ್ಯ ಪ್ರದೇಶದಿಂದ ನಾಡಿಗೆ ಬಂದಿತ್ತು. ಅಶೋಕ್ ಹೆಬ್ಬಾವನ್ನು ಹಿಡಿದಿದ್ದರಿಂದ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಉರಗ ಪ್ರೇಮಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.