ಚಾಮರಾಜನಗರ :ಸ್ಟಾರ್ ಕುಟುಂಬದಲ್ಲಿ ಹುಟ್ಟಿದ್ದರೂ ಅಹಂ ಪ್ರದರ್ಶಿಸದ ನಟ ಪುನೀತ್ ರಾಜ್‍ಕುಮಾರ್ ತಾಳವಾಡಿಯ ದೊಡ್ಡ ಗಾಜನೂರಿಗೆ ಆಗಾಗ ಬಂದು ಹೋಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನಂಟನ್ನು ಬೆಳೆಸಿಕೊಂಡಿದ್ದರು.
ದೊಡ್ಡಗಾಜನೂರಿಗೆ ಕುಟುಂಬ ಸಮೇತ, ಇಲ್ಲವೇ ಒಬ್ಬರೇ ಬಂದು ಹೋಗುತ್ತಿದ್ದ ಅಪ್ಪು ಇಂದು ಇಲ್ಲವೇ ನಾಳೆ ಗಾಜನೂರಿಗೆ ಬರುವುದಾಗಿ ಸಹೋದರ ಸಂಬಂಧಿಗಳಿಗೆ ತಿಳಿಸಿದ್ದಾಗಿ ಮೂಲಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿವೆ.
ಗಾಜನೂರಿಗೆ ಬಂದಾಗಲೆಲ್ಲ ತಮ್ಮ ಒಡೆತನ ವ್ಯಾಪ್ತಿಗೆ ಬರುವ ಜಮೀನಿನಲ್ಲಿ ಸುತ್ತಾಡುತ್ತಿದ್ದ ಅಪ್ಪು, ಅಣ್ಣಾವ್ರ ನೆಚ್ಚಿನ ಆಲದ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು.
ರಾಜ್‍ಕುಮಾರ್ ಹುಟ್ಟಿದ ಹಳೆಯ ಮನೆಗೂ ಭೇಟಿ ಕೊಟ್ಟು ಗ್ರಾಮಸ್ಥರನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು ಎಂದು ಗಾಜನೂರಿನ ನಿವಾಸಿ ಲಕ್ಷ್ಮಣ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಶಿವಣ್ಣ ಮತ್ತು ಅಪ್ಪು ತಮ್ಮ ಇಡೀ ಕುಟುಂಬದೊಂದಿಗೆ ಗಾಜನೂರಿಗೆ ಭೇಟಿಯಿತ್ತು ಬಾಡೂಟ ಸವಿದು, ಸ್ಥಳೀಯರೊಟ್ಟಿಗೆ ಆತ್ಮೀಯವಾಗಿ ಮಾತನಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
ಆ ವೇಳೆ, ಮುತ್ತಣ್ಣನ ಮಗ ಎಂದು ಹಾರೈಸಿದ್ದ ಹಿರಿಯರೊಬ್ಬರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಪ್ಪು ಸಂಭ್ರಮಿಸಿದ್ದ ಫೋಟೋ ಸಖತ್ ವೈರಲ್ ಆಗಿತ್ತು. ತವರಿನ ಮೋಹ ಬಿಡದ ಅಪ್ಪು ಇಂದು ಇಲ್ಲವೇ ನಾಳೆ ಬರಬೇಕಿತ್ತು. ಆದರೆ, ಅಷ್ಟರಲ್ಲೇ, ವಿಧಿಯ ಕರೆಗೆ ಓಗೊಟ್ಟು ಹೋಗಿರುವುದು ಆಘಾತಕಾರಿ ವಿಷಯ.
ಹಿರಿಯರೊಬ್ಬರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಪ್ಪು ಇದನ್ನೂ ಓದಿ:'ಯುವರತ್ನ' ಸ್ಪೇನ್ ಚಿತ್ರೀಕರಣ ಕ್ಯಾನ್ಸಲ್ ಆಗಲು ಪುನೀತ್ಗೆ ಇದ್ದ ಆ ಅಭ್ಯಾಸವೇ ಕಾರಣವಂತೆ..