ಚಾಮರಾಜನಗರ: ಪುನೀತ್ ಎಂದರೆ ಸರಳ ವ್ಯಕ್ತಿತ್ವದ ಸಾಕಾರ ಮೂರ್ತಿ.. ನೆಚ್ಚಿನ ನಟ ತವರಿಗೆ ಬಂದಾಗಲೆಲ್ಲಾ ಕಾಲ ಕಳೆಯುತ್ತಿದ್ದುದು ಅಣ್ಣಾವ್ರ ಮನೆ ನೌಕರನ ಜೊತೆ. ಪುನೀತ್ ರಾಜ್ ಕುಮಾರ್ ಅವರು ಕೊನೆಯ ಬಾರಿಗೆ ಗಾಜನೂರಿಗೆ ಭೇಟಿ ಕೊಟ್ಟಿದ್ದನ್ನು ನಿತ್ಯವೂ ನೆನಪಿಸಿಕೊಳ್ಳುತ್ತಾರೆ ನೌಕರ ಮಹೇಶ್.
ಅಪ್ಪು ನೆನಪಿಸಿಕೊಂಡು ಬಿಕ್ಕಳಿಸಿದ ಅಣ್ಣಾವ್ರ ಮನೆ ನೌಕರ ಹೌದು..., ಗಾಜನೂರಿನ ಮನೆಯಲ್ಲಿ ತನ್ನ ತಾಯಿಯೊಟ್ಟಿಗೆ ದೊಡ್ಮನೆಯ ಜಮೀನು, ಮನೆಗೆಲಸ ನೋಡಿಕೊಳ್ಳುವ ಮಹೇಶ್ ಎಂಬ ನೌಕರ, ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಕಳೆದ ಸಮಯವನ್ನು ಮೆಲುಕು ಹಾಕಿದ್ದಾರೆ.
ಅವರು ತವರಿಗೆ ಬಂದಾಗಲೆಲ್ಲಾ ಹೆಚ್ಚು ಸಮಯ ತನ್ನೊಂದಿಗೆ ಇರುತ್ತಿದ್ದರು, ಪುನೀತ್ ಸಾರ್ ಬಂದಾಗಲೆಲ್ಲಾ ನಾನ್ ವೆಜ್ ಊಟವನ್ನು ನಾನೇ ಬಡಿಸುತ್ತಿದೆ. ಬೀರೇಶ್ವರ ಸ್ವಾಮಿ ದೇವಾಲಯದ ಪ್ರಸಾದ ಎಂದರೇ ಅವರಿಗೆ ಎಲ್ಲಿಲ್ಲದ ಭಕ್ತಿ. ಅವರ ಕೊನೆಯ ಗಾಜನೂರು ಭೇಟಿಯಲ್ಲಿ ಅವರನ್ನು ತಬ್ಬಿಕೊಂಡು ಮುತ್ತು ಕೊಡುವ ಫೋಟೋ ತೆಗೆಸಿಕೊಂಡಿದ್ದೆ, ಅದನ್ನು ನೋಡಿದಾಗಲೆಲ್ಲಾ ಅಳು ಬರುತ್ತದೆ ಎಂದು ಅವರು ಗದ್ಗದಿತರಾದರು.
ರಾಘವೇಂದ್ರ ರಾಜ್‍ಕುಮಾರ್ ಎರಡನೇ ಪುತ್ರನಿಗೆ ಸಹಾಯಕನಾಗಿದ್ದ ವೇಳೆ, ಪುನೀತ್ ಅಗಲುವ 5 ದಿನಕ್ಕೂ ಮುನ್ನ ಅವರೊಟ್ಟಿಗೆ ಒಂದು ಫೋಟೋ ತೆಗೆಸಿಕೊಂಡಿದ್ದೆ, ತನ್ನನ್ನು ಮಗನಂತೆ ಕಾಣುತ್ತಿದ್ದರು. ಅವರ ಕೊನೆಯ ಚಿತ್ರವನ್ನು ಮೊದಲನೇ ದಿನವೇ ನೋಡಿ ಬಂದಿದ್ದೇನೆ ಎಂದು ತಿಳಿಸಿದರು.
ಕೆಲವು ಸೆಲೆಬ್ರಿಟಿಗಳು ಅಭಿಮಾನಿಗಳೊಟ್ಟಿಗೆ ಫೋಟೋ ತೆಗೆಸಿಕೊಳ್ಳಲು ಹಿಂದುಮುಂದು ನೋಡುವ ಈ ಕಾಲದಲ್ಲಿ ಮನೆಯ ನೌಕರನೊಟ್ಟಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಪುನೀತ್ ಅವರು ಏಕೆ ಎಲ್ಲರಿಗಿಂತ ಭಿನ್ನ ನಟ ಎಂಬುದನ್ನು ಸಾಕ್ಷೀಕರಿಸುತ್ತದೆ.