ಚಾಮರಾಜನಗರ: ಅಪ್ಪು ದೊಡ್ಮನೆಯ ಮುಕುಟ. ರಾಜ್ ಅವರಂತೆ ಸಾತ್ವಿಕ ಸ್ವಭಾವ - ಮಾತುಕತೆ ಆದರೆ ಸ್ವಲ್ಪ ಹಠವಾದಿ, ಹಿರಿಯರನ್ನು ಕಂಡರೇ ಅಷ್ಟೇ ಗೌರವ ಎಂದು ಕಣ್ಣೀರಾದರು ರಾಜ್ ಕುಟುಂಬದ ಒಡನಾಡಿ ಜಯಸಿಂಹ.
ಜಯಸಿಂಹ ಚಾಮರಾಜನಗರದ ಸಿಂಹ ಚಿತ್ರಮಂದಿರದ ಮಾಲೀಕರಾಗಿದ್ದು, ಅಣ್ಣಾವ್ರು ಮತ್ತು ಪಾರ್ವತಮ್ಮ ಅವರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಪ್ಪು ಬೆಳೆದು ಬಂದ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅಪ್ಪು ಬಹಳ ಹಠವಾದಿ. ಒಂದು ವಸ್ತು ಬೇಕೆಂದರೆ ಅದು ಅದು ಸಿಗುವ ತನಕ ಸುಮ್ಮನಿರುತ್ತಿರಲಿಲ್ಲ. ಪುನೀತ ಪಾರ್ವತಮ್ಮನವರ ಮುದ್ದಿನ ಮಗ ಆಗಿದ್ದ ಎಂದರು.
ಅಪ್ಪು ನೆನೆದು ಕಣ್ಣೀರಾದ ಒಡನಾಡಿ ವಜ್ರೇಶ್ವರಿ ಕಚೇರಿಗೆ ಹೋಗುತ್ತಿದ್ದಾಗ ಅಲ್ಲಿ ಬಾಲಕ ಪುನೀತ್ ಕೂಡ ಇರುತ್ತಿದ್ದರು. ತಿಂಡಿ, ಅಟಿಕೆ ವಿಚಾರದಲ್ಲಿ ಅವರು ಎಷ್ಟು ಹಠ ಹಿಡಿಯುತ್ತಿದ್ದರೆಂದರೆ ಅದು ತನ್ನ ಕೈ ಸೇರುವ ತನಕ ಸುಮ್ಮನಿರುತ್ತಿರಲಿಲ್ಲ. ಒಮ್ಮೆ ದೀಪಾವಳಿ ಸಂದರ್ಭದಲ್ಲಿ ಪಟಾಕಿಬೇಕೆಂದು ಹಠ ಹಿಡಿದು ಪಟಾಕಿ ತಂದು ಕೊಡುವ ತನಕ ಅಳು ನಿಲ್ಲಿಸಿರಲಿಲ್ಲ.
ಇದು ಅವರ ಕಾರುಗಳ ವಿಚಾರದಲ್ಲೂ ಮುಂದುವರೆಯಿತು. 25-27 ವರ್ಷಗಳ ಹಿಂದೆ 35 ಸಾವಿರ ಬೆಲೆಯ ಫೋನ್ ಕೊಂಡು ಪುನೀತ್ ಬಳಸುತ್ತಿದ್ದರು, ಅಣ್ಣಾವ್ರು ಅಂತೂ ಅಷ್ಟು ಬೆಲೆಯ ಫೋನ್ ಎಂದು ಅಸಮಾಧಾನ ಹೊರಹಾಕಿದ್ದರು. ಆದರೆ, ಅಪ್ಪು ಏನು ಇಚ್ಛಿಸುತ್ತಿದ್ದರೋ ಅದನ್ನು ಪಡೆಯುತ್ತಿದ್ದರು ಎಂದು ಪುನೀತ್ ರಾಜ್‍ಕುಮಾರ್ ನೆನೆದು ಕಣ್ಣೀರಾದರು.
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದಲ್ಲಿ ಕರಿಕಲ್ಲು ಉದ್ಯಮ ಪ್ರಾರಂಭಿಸಲು ಪುನೀತ್ ಉತ್ಸುಕರಾಗಿದ್ದರು. ಆದರೆ, ಅಣ್ಣಾವ್ರಿಗೆ ಇಷ್ಟ ಇರಲಿಲ್ಲ. ಚಿತ್ರರಂಗದಲ್ಲೇ ಮುಂದುವರೆಯುವಂತೆ ಸಲಹೆ ನೀಡಿದ್ದರು. ಬಳಿಕ ಕರಿಕಲ್ಲು ಉದ್ಯಮದ ಮೋಹವನ್ನು ಅಪ್ಪು ಬಿಟ್ಟರು. ಅವರು 6 ತಿಂಗಳು ಮಗುವಾಗಿದ್ದಾಗ ನಟಿಸಿದ ‘ಪ್ರೇಮದ ಕಾಣಿಕೆ’ ಚಿತ್ರವನ್ನು ನಿರ್ಮಿಸಿದವರು ಚಾಮರಾಜನಗರದವರೇ ಆದ ಮಲ್ಲೀಕ್ ಅವರು, ರಾಜ್ ಕುಟುಂಬದ ಒಡನಾಟ ಏಕೆ ಇಟ್ಟುಕೊಂಡೆವೋ ಎನ್ನುವಷ್ಟರ ಮಟ್ಟಿಗೆ ಆಘಾತವಾಗಿದೆ, ಅವರ ಜೊತೆ ಸ್ನೇಹ ಸಂಪಾದಿಸಿದ್ದು ಇಷ್ಟು ದುಃಖ ಪಡಲೇ ಎಂಬಂತಾಗಿದೆ ಎಂದು ಕಣ್ಣೀರಾದರು.
ಹಳ್ಳಿಯಲ್ಲಿ ಬಾಲ್ಯ :ಪಾರ್ವತಮ್ಮ ರಾಜ್‍ಕುಮಾರ್ ಅವರ ಸಹೋದರಿ ನಾಗಮ್ಮ ವಾಸವಿದ್ದ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಪುನೀತ್ ಒಂದಷ್ಟು ವರ್ಷಗಳ ಕಾಲ ಬಾಲ್ಯ ಕಳೆದಿದ್ದರು. ಚಿಕ್ಕಮ್ಮನ ಮನೆಯಲ್ಲಿದ್ದಷ್ಟು ಕಾಲ ಬಾವಿಯಲ್ಲಿ ಈಜುವುದು, ಗೋಲಿ ಆಡುವುದು, ಕಬ್ಬು ತಿನ್ನುವುದನ್ನು ಮಾಡುತ್ತಿದ್ದರು ಎಂದು ಬಾಲ್ಯದ ಗೆಳೆಯ ಮುರುಳಿ ನೆನಪಿಸಿಕೊಂಡಿದ್ದಾರೆ.