ಚಾಮರಾಜನಗರ: ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಚಾಮರಾಜನಗರ ಜಿಲ್ಲೆಗೆ ಯಾವುದೇ ಯೋಜನೆಗಳನ್ನು ನೀಡದಿದ್ದನ್ನು ಖಂಡಿಸಿ ಕರ್ನಾಟಕ ಪ್ರಜಾ ಪಾರ್ಟಿ ಹಾಗೂ ಕದಂಬ ಸೇನೆ ಕಾರ್ಯಕರ್ತರು ಸೋಮವಾರ ರಾತ್ರಿ 8.30 ರ ಸುಮಾರಿಗೆ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟಿಸಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ, ಭುವನೇಶ್ವರಿ ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಸಾಗಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 209ಅನ್ನು ಕೆಲಕಾಲ ತಡೆದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬಜೆಟ್ನಲ್ಲಿ ಚಾಮರಾಜನಗರ ನಿರ್ಲಕ್ಷ್ಯ ಖಂಡಿಸಿ ಮೇಣದಬತ್ತಿ ಹಿಡಿದು ಪ್ರತಿಭಟನೆ ಕೇಂದ್ರ ಸರ್ಕಾರ ಕಳೆದ ಬಾರಿಯಂತೆ ಈ ಬಾರಿಯೂ ಸಹಾ ಬಜೆಟ್ನಲ್ಲಿ ಚಾಮರಾಜನಗರಕ್ಕೆ ಯಾವುದೇ ಪ್ರಾತಿನಿಧ್ಯ ನೀಡದೇ ಮಲತಾಯಿ ಧೋರಣೆ ತೋರಿದ್ದಾರೆ. ಚಾಮರಾಜನಗರ ಮೇಟ್ಟುಪಾಳ್ಯಂ ರೈಲ್ವೆ ಯೋಜನೆ, ಚಾಮರಾಜನಗರ-ಹೆಜ್ಜಾಲ ರೈಲ್ವೆ ಸಂಪರ್ಕದ ನಿರೀಕ್ಷೆಗೆ ತಣ್ಣೀರೆರೆಚಿದ್ದಾರೆ. ಸಾರಿಗೆ ಸಂಪರ್ಕಗಳ ಬಳಕೆಗೆ ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆ ಮಾಡಿ ದಿನಬಳಕೆ ವಸ್ತುಗಳ ಮತ್ತು ಆಹಾರ ಪದಾರ್ಥಗಳ ಏರಿಕೆಗೆ ಸರ್ಕಾರ ಕಾರಣಕರ್ತವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ಸಾಮಾನ್ಯ ಜನರ ಮೇಲೆ ಹೊರೆ ಹೊರೆಸಿ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಚಿಕಿತ್ಸೆಗೆ ಸಹಕಾರಿಯಾಗುವ ಹೆಸರಿನಲ್ಲಿ ಸಾಮಾನ್ಯರ ಬಳಿ ಹಣ ಸುಲಿಯುವ ಕೆಲಸ ಮಾಡಿ, ಮೂಗಿಗೆ ತುಪ್ಪ ಸವರಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ವಕೀಲ ಪ್ರಸನ್ನ ಕುಮಾರ್, ಅಂಬರೀಶ್ ಇದ್ದರು.