ಚಾಮರಾಜನಗರ :ಕೊಳ್ಳೇಗಾಲ ತಾಲೂಕಿನ ಜನತೆಯ ಬಹು ವರ್ಷದ ಕನಸಾದ ಸುಸಜ್ಜಿತ ಬಸ್ ನಿಲ್ದಾಣದ ಉದ್ಘಾಟನೆ ವೇಳೆ ಬಿಜೆಪಿ ಕೆಲ ಸದಸ್ಯರು ಸೇರಿದಂತೆ ನಗರಸಭೆ ಸದಸ್ಯರು ಶಾಸಕ ಎನ್.ಮಹೇಶ್ ವಿರುದ್ಧ ಪ್ರತಿಭಟಿಸಿದ ಘಟನೆ ನಡೆಯಿತು. ಕೊಳ್ಳೇಗಾಲದಲ್ಲಿ ಕಳೆದ ಐದೂವರೆ ವರ್ಷಗಳಿಂದ ನಡೆಯುತ್ತಿದ್ದ ಹೈಟೆಕ್ ಬಸ್ ನಿಲ್ದಾಣವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಿದ್ದು, ಕಾಮಗಾರಿ ಅಪೂರ್ಣವಾಗಿದ್ದರೂ ಉದ್ಘಾಟನಾ ಭಾಗ್ಯ ಕರುಣಿಸಿದ್ದಾರೆ ಎಂಬುದು ನಗರಸಭೆ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಇನ್ನಿತರ ಸದಸ್ಯರ ಆರೋಪವಾಗಿದೆ.
ಈ ವಿಚಾರವಾಗಿ ಮಾತನಾಡಿದ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ರೇಖಾ, ನಗರಸಭೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹಾಗು ಸಭೆಗೂ ಕರೆಯದೇ ಏಕಪಕ್ಷೀಯವಾಗಿ ಶಾಸಕ ಎನ್.ಮಹೇಶ್ ನಿರ್ಧಾರ ತೆಗೆದುಕೊಂಡು ಅಪೂರ್ಣ ಕಾಮಗಾರಿಯನ್ನು ಉದ್ಘಾಟಿಸುತ್ತಿದ್ದಾರೆ. ಯುಜಿಡಿ, ಶೌಚಾಲಯ ವ್ಯವಸ್ಥೆ ಇನ್ನೂ ಆಗಿಲ್ಲ. ಮಹಿಳಾ ಪ್ರಯಾಣಿಕರು ಶೌಚಾಲಯಕ್ಕೆ ಎಲ್ಲಿಗೆ ತೆರಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ನಗರಸಭೆಯಿಂದ ಮತ್ತೊಮ್ಮೆ ಉದ್ಘಾಟನೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಇನ್ನು, ಪ್ಲೆಕಾರ್ಡ್ ಹಿಡಿದು ಪ್ರತಿಭಟಿಸುತ್ತಿದ್ದವರನ್ನು ಸಮಾಧಾನ ಪಡಿಸಲು ಸಚಿವ ಸೋಮಣ್ಣ ಮುಂದಾದ ವೇಳೆ ಆರೋಪಗಳ ಸುರಿಮಳೆಗೈದ ಸದಸ್ಯರು, ನಿಮ್ಮಲ್ಲಿರುವ ಸೌಜನ್ಯವೂ ಅವರಿಗಿಲ್ಲ. ಅನುದಾನಕ್ಕೆ ನಗರಸಭೆ ಬೇಕು, ಉದ್ಘಾಟನೆಗೆ ನಗರಸಭೆ ಬೇಡವೇ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು. ಈ ವೇಳೆ ನಗರಸಭೆ ಸದಸ್ಯರ ವಿರೋಧದ ನಡುವೆಯೂ ಕೊಳ್ಳೇಗಾಲ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ ಆಗಿದೆ. ಪ್ರತಿಭಟನೆಯಲ್ಲಿ ಬಿಜೆಪಿ ನಾಲ್ವರು ಸದಸ್ಯರು, ಬಿಎಸ್ಪಿಯ ಇಬ್ಬರು, ಕಾಂಗ್ರೆಸ್‌ನ 12 ಹಾಗೂ ಪಕ್ಷೇತರ ನಾಲ್ವರು ಸದಸ್ಯರು ಭಾಗಿಯಾಗಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದರು.