ಚಾಮರಾಜನಗರ: ಬಂಡೀಪುರದಲ್ಲಿ ಬುಧವಾರ ಸಫಾರಿ ನಡೆಸುವ ಪ್ಲಾನ್ ಮಾಡಿಕೊಂಡಿದ್ದರೇ ಅದನ್ನೂ ಮುಂದೂಡಿ, ಯಾಕೆಂದರೆ ಅಂದು ಬಂಡೀಪುರದಲ್ಲಿ ಸಫಾರಿಯನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಸಫಾರಿ ಕೇಂದ್ರವಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸೆ.20 ರಂದು ಸಫಾರಿ ಬಂದ್ ಮಾಡಲಾಗುತ್ತಿದೆ ಎಂದು ಬಂಡೀಪುರ ಸಿಎಫ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಂಡೀಪುರದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯ ಅಧಿಕಾರಿ ಹಾಗೂ ಸಿಬ್ಬಂದಿ ಕುಟುಂಬಸ್ಥರಿಗೆ ವಿಶೇಷ ಔತಣಕೂಟ ಏರ್ಪಡಿಸಿರುವುದರಿಂದ ಸಫಾರಿ ಬಂದ್ ಮಾಡುವುದಾಗಿ ರಮೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತ್ಯೇಕ ಘಟನೆ- ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಪ್ರತಿಭಟನೆ:ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ಕ್ರಮ ಖಂಡಿಸಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಚಾಮರಾಜನಗರ ಜಿಲ್ಲಾಡಳಿತ ಭವನ ಮುಂಭಾಗ ಚಾ.ರಂ. ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಖಾಲಿ ಕೊಡ ಪ್ರದರ್ಶನ ಮಾಡಿ ತಮಿಳುನಾಡು ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.