ಚಾಮರಾಜನಗರ: ಬಂಡೀಪುರ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯದಿಂದಾಗಿ ಆನೆ ಬದುಕುಳಿದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ವ್ಯಕ್ತ ಪಡಿಸಿದ್ದಾರೆ. ಕಳೆದ ಮಂಗಳವಾರ ಬೆಳೆ ರಕ್ಷಣೆಗಾಗಿ ಹಾಕಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕದಿಂದ ಆಹಾರ ಅರಸಿ ಬಂದ ಕಾಡಾನೆಯೊಂದು ಒದ್ದಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದಿತ್ತು.
ತಕ್ಷಣವೇ ಬಂಡೀಪುರ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಎಚ್ಚೆತ್ತುಕೊಂಡು ಸತತ ಪ್ರಯತ್ನದಿಂದ 4 ಗಂಟೆ ಚಿಕಿತ್ಸೆ ನೀಡಿ ಅದರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ರಕ್ಷಣಾ ಕಾರ್ಯಚರಣೆಯ ವಿಡಿಯೋ ಎಲ್ಲಡೆ ಹರಿದಾಡುತ್ತಿದ್ದಂತೆ ಮೆಚ್ಚುಗೆ ಬರಲು ಪ್ರಾರಂಭಿಸಿದವು. ಈ ಕಾರ್ಯಕ್ಕೆ ಅರಣ್ಯ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿ ಬಂಡೀಪುರ ಅರಣ್ಯ ಇಲಾಖೆ ಕಾರ್ಯವನ್ನು ಶ್ಲಾಘಿಸಿದ್ದರು.
ಸಚಿವ ಭೂಪೇಂದ್ರ ಯಾದವ್ ಅವರು ಟ್ವೀಟ್ ಮಾಡಿ, ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದ ಸಿಬ್ಬಂದಿಯ ತ್ವರಿತ ಕ್ರಮದಿಂದಾಗಿ ವಿದ್ಯುತ್ ಸ್ಪರ್ಶದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆನೆಯನ್ನು ರಕ್ಷಿಸಲಾಗಿದೆ. ಬಳಿಕ ಆ ಹೆಣ್ಣು ಆನೆಯನ್ನು ಮತ್ತೆ ಮೀಸಲು ಪ್ರದೇಶಕ್ಕೆ ಬಿಡಲಾಗಿದ್ದು, ತೀವ್ರ ನಿಗಾ ಇರಿಸಲಾಗಿದೆ. ಆನೆಯ ರಕ್ಷಣೆಯಿಂದಾಗಿ ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಟ್ವೀಟ್ಗೆ ಸಚಿವರು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ವಿಡಿಯೋವನ್ನು ಸಹ ಲಗತ್ತಿಸಿರುವುದು ಗಮನಾರ್ಹ..
ಪ್ರಧಾನಿ ಮೋದಿ ರೀಟ್ವೀಟ್..: ಇನ್ನು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರ ಟ್ವೀಟ್ಗೆ ಮೋದಿ ರೀಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ನನಗೂ ಸಂತೋಷವಾಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗೆ ಅಭಿನಂದನೆಗಳು. ನಮ್ಮ ಜನರಲ್ಲಿ ಇಂತಹ ಸಹಾನುಭೂತಿ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಂತಸ ಮೂಡಿದೆ.