ಚಾಮರಾಜನಗರ:ಇದೇ ಅಕ್ಟೋಬರ್ 7 ಅಥವಾ 9ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಚಾಮರಾಜನಗರ ಪ್ರವಾಸ ಹಮ್ಮಿಕೊಂಡಿದ್ದು, ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮೊದಲಿಗೆ ಬಿಳಿಗಿರಿ ರಂಗನಾಥ ದೇವಾಲಯಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು, ಬಳಿಕ ಚಾಮರಾಜನಗರ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಉದ್ಘಾಟಿಸುವರು ಎಂದು ತಿಳಿದುಬಂದಿದೆ.
ಬಹುತೇಕ ಅಕ್ಟೋಬರ್ 9 ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಸಿಎಂ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಭವನದಿಂದ ಬಂದ ಸೂಚನೆಯ ಮೇರೆಗೆ ಎಡಿಸಿ ಕಾತ್ಯಾಯಿನಿ ದೇವಿ ನೇತೃತ್ವದಲ್ಲಿ ಇಂದು ಬಿಳಿಗಿರಿರಂಗನ ಬೆಟ್ಟದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಾಗ ಗುರುತಿಸುವ ಪ್ರಕ್ರಿಯೆ ನಡೆಯಿತು.
ವಿಜಿಕೆಕೆ ಆವರಣ, ಮೊರಾರ್ಜಿ ವಸತಿ ಶಾಲೆ ಸಮೀಪ ಹಾಗೂ ವಡ್ಡಗೆರೆ ಆಂಜನೇಯ ದೇಗುಲ ಸಮೀಪ ಮತ್ತು ಚಾಮರಾಜನಗರದ ಎಡಪುರ ಬಳಿ ಜಾಗ ಗುರುತಿಸಲಾಗಿದೆ. ಗುರುವಾರ ಇಲ್ಲವೇ ಶುಕ್ರವಾರ ಹೆಲಿಪ್ಯಾಡ್ ಸ್ಥಳ ಅಂತಿಮಗೊಳಿಸಲಾಗುತ್ತದೆ ಎಂದು ಈಟಿವಿ ಭಾರತಕ್ಕೆ ಮೂಲಗಳು ತಿಳಿಸಿವೆ.
ಚಾಮರಾಜನಗರದ ಹೊರ ವಲಯದಲ್ಲಿರುವ ಯಡಬೆಟ್ಟದ ಮೆಡಿಕಲ್ ಕಾಲೇಜು ಬಳಿ ಸುಮಾರು 116 ಕೋಟಿ ರೂ. ವೆಚ್ಚದಲ್ಲಿ 400 ಬೆಡ್ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಉದ್ಘಾಟನೆಗಾಗಿ ಸಿದ್ಧತೆ ನಡೆಯುತ್ತಿದೆ.