ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ ‌ನಗರಸಭೆ ಅಧ್ಯಕ್ಷ ಗಾದಿಗೆ ಭಾರೀ ಪೈಪೋಟಿ.. ಮೇಲುಗೈ ಸಾಧಿಸಲು ಶಾಸಕ ಎನ್. ಮಹೇಶ್ ಕಸರತ್ತು - ಶಾಸಕ ಎನ್.ಮಹೇಶ್

ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಹೊರಬಿದ್ದ ದಿನದಿಂದ ರಾಜಕೀಯ ಚಿತ್ರಣ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ. ಮುಖಂಡರು ಮೈತ್ರಿ ರಾಜಕೀಯ ಕಸರತ್ತು ಮಾಡುತ್ತಿದ್ದರೆ, ಸದಸ್ಯರುಗಳು‌ ಅಧ್ಯಕ್ಷ ‌ಮತ್ತು‌ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ‌ನಡೆಸುತ್ತಿದ್ದಾರೆ.

kollegal Municipal Council
ಕೊಳ್ಳೇಗಾಲ ‌ನಗರಸಭೆ

By

Published : Oct 11, 2020, 6:51 AM IST

Updated : Oct 11, 2020, 6:57 AM IST

ಕೊಳ್ಳೇಗಾಲ(ಚಾಮರಾಜನಗರ): ನಗರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ(ಎಸ್​ಟಿ) ಮಹಿಳೆಗೆ ಮೀಸಲು ಎಂದು ಪ್ರಕಟಗೊಂಡಿರುವ ಹಿನ್ನೆಲೆ, ಕಾಂಗ್ರೆಸ್, ಬಿಜೆಪಿ ಹಾಗೂ ಬಿಎಸ್​ಪಿ ಪಕ್ಷದ ಮುಖಂಡರು, ಜೊತೆಗೆ ಬಿಎಸ್​ಪಿಯಿಂದ ಉಚ್ಛಾಟನೆಗೊಂಡ ಶಾಸಕ ಎನ್.ಮಹೇಶ್ ಸಹ 7 ಮಂದಿ ಸದಸ್ಯರ ಬೆಂಬಲ ಪಡೆದು ಆಡಳಿತ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ.

ಈಗ ಒಟ್ಟು 31 ಸದಸ್ಯ ಸ್ಥಾನ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ 11, ಬಿಎಸ್​ಪಿ 9, ಬಿಜೆಪಿ 7, ಪಕ್ಷೇತರ 4 ಸದಸ್ಯರನ್ನು ಹೊಂದಿದೆ. ಪಕ್ಷೇತರ ಸದಸ್ಯರುಗಳಾದ ಮನೋಹರ್, ಎ.ಪಿ.ಶಂಕರ್, ಶಂಕರ ನಾರಾಯಣಗುಪ್ತ ಮತ್ತು ಪಿ.ಎಸ್. ಕವಿತಾ ಅವರು ಬಹುತೇಕವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದ ಕಾಂಗ್ರೆಸ್ ಪಡೆದಿರುವ 11 ಸದ್ಯಸರ ಜೊತೆ 4 ಸದಸ್ಯರು ಸೇರಿದರೆ ಒಟ್ಟು 15 ಸದಸ್ಯ ಬಲ ಸಿಗುವ ನಿರೀಕ್ಷೆಯಿದೆ. ಸಂಸದ ಮತ್ತು ಶಾಸಕರಿಗೆ ತಲಾ ಒಂದು ಮತದ ಹಕ್ಕು ಇರುವುದರಿಂದ ಯಾವುದೇ ಪಕ್ಷ ಅಧಿಕಾರ ಹಿಡಿಯಲು 17 ಸದಸ್ಯರ ಬೆಂಬಲ ಅತ್ಯಗತ್ಯವಾಗಿದೆ.

ಬಿಎಸ್​ಪಿ ಪಕ್ಷದಲ್ಲಿ ತಟಸ್ಥವಾಗಿ ಉಳಿದಿರುವ ಜಯಮೇರಿ ಹಾಗೂ ಜಯಂತ್ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ಬೆಂಬಲಿಸುತ್ತಾರೆ ಎಂಬ ಮಾತು ಕೇಳಿ ಬಂದರೂ, ಪಕ್ಷದ ತೀರ್ಮಾನಕ್ಕೆ ‌ಬದ್ಧವಾಗಿರುತ್ತಾರೆ‌ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದವರು ಕೊಳ್ಳೇಗಾಲ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವ ನಿರೀಕ್ಷೆ ಹೊಂದಿದ್ದಾರೆ. ಬಿಎಸ್​ಪಿಯಿಂದ ಗೆದ್ದ 9 ಜನರ ಪೈಕಿ, ಸ್ಥಳೀಯ ಶಾಸಕ ಮತ್ತು ಬಿಎಸ್​ಪಿ ಉಚ್ಛಾಟಿತ ಎನ್. ಮಹೇಶ್ ಅವರ ಜೊತೆ‌ ಏಳು ಮಂದಿ‌ ಇದ್ದಾರೆ. ಇನ್ನುಳಿದ ಇಬ್ಬರು ಬಿಎಸ್​ಪಿಯಲ್ಲೇ ಉಳಿದಿದ್ದಾರೆ. ಇವರಿಬ್ಬರು ಕಾಂಗ್ರೆಸ್​ಗೆ ಕೈಜೋಡಿಸಿದರೆ ಯಾವುದೇ ತೊಂದರೆಯಿಲ್ಲದೆ ಅಧಿಕಾರ ಹಿಡಿಯುತ್ತದೆ.

ಬಿಜೆಪಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಎನ್. ಮಹೇಶ್ ತಮ್ಮ 7 ಸಂಖ್ಯಾಬಲದ ಜೊತೆ, ಬಿಜೆಪಿ 7 ಸದಸ್ಯರ ಬಲ ಪಡೆದರೆ 14 ಸ್ಥಾನಗಳನ್ನಷ್ಟೇ ಗಿಟ್ಟಿಸುತ್ತಾರೆ. ಆದ್ರೆ, ಇನ್ನಿಬ್ಬರ ಬೆಂಬಲ ಬೇಕಾಗಿದ್ದು ಕೊಳ್ಳೇಗಾಲದಲ್ಲಿ ಯಾರ ಜೊತೆ ಮೈತ್ರಿ ಏರ್ಪಡುತ್ತದೆ ಎಂಬುದು ಕುತೂಹಲ ಸೃಷ್ಟಿಸಿದೆ. 31 ಸದಸ್ಯರ‌ ಪೈಕಿ ಕಾಂಗ್ರೆಸ್ 7, ಬಿಎಸ್​ಪಿ 5, ಬಿಜೆಪಿ‌ 3 ಸದಸ್ಯರು ಸೇರಿದಂತೆ ಒಟ್ಟು 15 ಮಹಿಳಾ ಸದಸ್ಯರಿದ್ದಾರೆ. ಕಾಂಗ್ರೆಸ್ ಮತ್ತು ಬೆಜೆಪಿಯಲ್ಲಿ ತಲಾ ಇಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ.

ಒಟ್ಟಾರೆ‌ ರಾಜಕೀಯ ಚಿತ್ರಣ ದಿನದಿಂದ ದಿನಕ್ಕೆ ಬಹಳ ಕುತೂಹಲ ಮೂಡಿಸಿದ್ದು. ಮುಖಂಡರು ಮೈತ್ರಿ ರಾಜಕೀಯ ಕಸರತ್ತು ಮಾಡುತ್ತಿದ್ದರೆ, ಸದಸ್ಯರುಗಳು‌ ಅಧ್ಯಕ್ಷ ‌ಮತ್ತು‌ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ‌ನಡೆಸುತ್ತಿದ್ದಾರೆ. ಸ್ಥಳೀಯ ಶಾಸಕ‌ ಎನ್.ಮಹೇಶ್ ಅವರಿಗಂತೂ ಇದು ಪ್ರತಿಷ್ಠೆಯ ವಿಷಯವಾಗಿದೆ.

Last Updated : Oct 11, 2020, 6:57 AM IST

ABOUT THE AUTHOR

...view details