ಚಾಮರಾಜನಗರ: ಅಕ್ರಮವಾಗಿ ರಸಗೊಬ್ಬರವನ್ನು ದಾಸ್ತಾನಿರಿಸಿದ್ದ ಶೆಡ್ ಮೇಲೆ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಹೊರವಲಯದಲ್ಲಿ ನಡೆದಿದೆ.
ಗೌರಮ್ಮ ಎಂಬವರಿಗೆ ಸೇರಿದ ಜಮೀನಿನಲ್ಲಿ ದಂಧೆಕೋರರು ಶಡ್ವೊಂದರಲ್ಲಿ ಅಕ್ರಮವಾಗಿ ರಸಗೊಬ್ಬರವನ್ನ ದಾಸ್ತಾನಿರಿಸಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಒಟ್ಟು 510 ರಸಗೊಬ್ಬರದ ಚೀಲಗಳನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನು ಅಕ್ರಮ ರಸಗೊಬ್ಬರ ದಾಸ್ತಾನಿರಿಸಿರುವ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಆರೋಪಿಗಳ ಹುಡುಕಾಟವನ್ನೂ ನಡೆಸಿದ್ದಾರೆ.
ಅಕ್ರಮವಾಗಿ ರಸಗೊಬ್ಬರ ದಾಸ್ತಾನಿರಿಸಿದ ಶೆಡ್ ಮೇಲೆ ದಾಳಿ ಗುಂಡ್ಲುಪೇಟೆ ತಾಲೂಕು ಕೇರಳ ಮತ್ತು ತಮಿಳುನಾಡಿನ ಗಡಿಯಾಗಿರುವ ಹಿನ್ನೆಲೆ ರಾಜ್ಯದಿಂದ ಅಕ್ರಮವಾಗಿ ರಸಗೊಬ್ಬರ ತಮಿಳುನಾಡಿಗೆ ಸಾಗಣೆಯಾಗುತ್ತಿದೆ ಎಂಬ ಆರೋಪಕ್ಕೆ ಇದು ಪುಷ್ಟಿ ನೀಡುವಂತಿದ್ದು, ಕಡಿಮೆ ಬೆಲೆಗೆ ಗೊಬ್ಬರ ತೆಗೆದುಕೊಂಡು ತಮಿಳುನಾಡಿನಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಜಾಲ ಇದಾಗಿದೆ.
ಈ ಜಾಲದ ವಿರುದ್ಧ ಜಿಲ್ಲಾಧಿಕಾರಿಗಳೇ ತನಿಖೆ ನಡೆಸಬೇಕೆಂದು ರೈತ ಮುಖಂಡರುಗಳು ಒತ್ತಾಯಿಸಿದ್ದಾರೆ. ಒಂದೆಡೆ ರಸಗೊಬ್ಬರಕ್ಕಾಗಿ ಸರತಿ ಸಾಲು ನಿಲ್ಲಬೇಕಾದ ಪರಿಸ್ಥಿತಿ ಇದ್ದರೇ ಮತ್ತೊಂದೆಡೆ ನೂರಾರು ಚೀಲ ರಸಗೊಬ್ಬರ ಹೀಗೆ ಅಕ್ರಮವಾಗಿ ಸಾಗಿಸುತ್ತಿರುವುದು ಅನ್ನದಾತರ ಆಕ್ರೋಶಕ್ಕೆ ಗುರಿಯಾಗಿದೆ.
ಇದನ್ನೂ ಓದಿ:ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಕ್ರಮ: ಕಡಿವಾಣಕ್ಕೆ ಸರ್ಕಾರದ ಹೊಸ ಅಸ್ತ್ರವೇನು?