ಚಾಮರಾಜನಗರ: ಎಂಎಲ್ಸಿ ಸಿ ಪಿ ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರಿಂದ ಸ್ಥಳ ಮಹಜರು ನಡೆಯಿತು. ಹನೂರು ತಾಲೂಕಿನ ರಾಮಾಪುರಕ್ಕೆ ಆರೋಪಿ ಮುರುಗೇಶ್ ಹಾಗೂ ಪ್ರಭಾಕರ್ ನನ್ನು ಕರೆತಂದ ರಾಮನಗರ ಪೊಲೀಸರು ಕಂದಕ, ಕಾರು ನಿಲ್ಲಿಸಿದ್ದ ಸ್ಥಳದಲ್ಲಿ ಮಹಜರು ನಡೆಸಿದರು. ಇನ್ನು, ಮಹಜರು ವೇಳೆ ಟೀ ಶರ್ಟ್ವೊಂದನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಮಹಾದೇವಯ್ಯ ಅವರನ್ನು ಕಿಡ್ನಾಪ್ ಮಾಡಿಕೊಂಡು ರಾಮಾಪುರಕ್ಕೆ ಬಂದ ಹಂತಕರು 50 ಅಡಿ ಆಳದ ಕಂದಕಕ್ಕೆ ಶವವನ್ನು ಇಟ್ಟು, ಬಳಿಕ ರಾಮಾಪುರದಲ್ಲಿ ಕಾರು ನಿಲ್ಲಿಸಿ, ಬಸ್ ಒಂದರ ಮೂಲಕ ಹನೂರಿಗೆ ಬಂದು ನಂತರ ಚನ್ನಪಟ್ಟಣಕ್ಕೆ ಹೋಗಿದ್ದನ್ನು ಪೊಲೀಸರಿಗೆ ವಿವರಿಸಿದ್ದಾರೆ.
ಕಳೆದ 4 ರಂದು ಕೊಲೆ ಪ್ರಕರಣ ಬೆಳಕಿಗೆ: ತೋಟದ ಮನೆಯಿಂದ ಕಾಣೆಯಾಗಿದ್ದ ಮಹಾದೇವಯ್ಯ ಅವರ ಶವ ಅರೆ ಕೊಳೆತ ಸ್ಥಿತಿಯಲ್ಲಿ ಕಳೆದ 4 ರಂದು ರಾಮಾಪುರದಿಂದ 6 ಕಿ ಮೀ ದೂರದ ಕಂದಕದಲ್ಲಿ ಪತ್ತೆಯಾಗಿತ್ತು. ರಾಮಾಪುರದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮಹಾದೇವಯ್ಯ ಕಾರು ಪತ್ತೆಯಾಗಿದ್ದರಿಂದ ಪೊಲೀಸರು ಕೂಂಬಿಂಗ್ ನಡೆಸಿದ್ದರು. ಸುಮಾರು 50 ಅಡಿ ಕಂದಕದಿಂದ ಹರಸಾಹಸಪಟ್ಟು ಮಹಾದೇವಯ್ಯ ಶವವನ್ನು ಹೊರಕ್ಕೆ ತರಲಾಗಿತ್ತು.