ಚಾಮರಾಜನಗರ:ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದದ ನೋವುಂಡವರ ಕಥೆ ಮುಗಿದಂತಿಲ್ಲ. ರಕ್ಕಸ ವಿಷವುಂಡು ಮರುಗಿದವರನ್ನು ಸರ್ಕಾರ ಕಡೆಗಣಿಸಿದೆ ಎಂದು ಪ್ರಸಾದ ದುರಂತದ ಸಂತ್ರಸ್ತರು ಆರೋಪಿಸಿದ್ದಾರೆ.
ಹನೂರಿನಲ್ಲಿ ವಿಷ ಪ್ರಸಾದ ದುರಂತದ 50ಕ್ಕೂ ಹೆಚ್ಚು ಮಂದಿ ಸಂತ್ರಸ್ತರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಸದೇ ಉದಾಸೀನ ತೋರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಂತ್ರಸ್ತರಿಗೆ 3 ಎಕರೆ ಜಮೀನು ಮತ್ತು ಕೊಳವೆ ಬಾವಿ ಕೊರೆಸಿ ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. 3 ಲಕ್ಷ ರೂ.ವರೆಗೆ ನೇರ ಸಾಲ ನೀಡುವ ಜೊತೆಗೆ ಉದ್ಯೋಗ ಸೃಷ್ಟಿ ಮಾಡಿಕೊಡುವುದಾಗಿ ನೀಡಿದ್ದ ಮಾತುಗಳು ಹುಸಿಯಾಗಿವೆ ಎಂದು ವಿಷ ಪ್ರಸಾದ ದುರಂತದ ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ. ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಕೂಡಲೇ ಈಡೇರಿಸಿ ಪ್ರಕರಣದಲ್ಲಿ ಬಲಿಪಶುಗಳಾದ ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.