ಚಾಮರಾಜನಗರ: ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ, ಓಪನ್ ಜೀಪ್ನಲ್ಲಿ ವನ್ಯಜೀವಿ ಸಫಾರಿ ನಡೆಸಿದ್ದಾರೆ. ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮೋದಿ ಸಂಚರಿಸುತ್ತಿದ್ದಾರೆ. ಸಫಾರಿ ವೇಳೆ ಪ್ರಧಾನಿ ಮೋದಿ ಅವರು ಆನೆ, ಜಿಂಕೆ, ಕಡವೆ, ಕಾಡೆಮ್ಮೆ ನೋಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು, ಸಫಾರಿ ಬಳಿಕ ತಮಿಳುನಾಡಿನ ತೆಪ್ಪಕಾಡಿ ನ ಆನೆ ಶಿಬಿರಕ್ಕೆ ಭೇಟಿ ಕೊಡುತ್ತಿದ್ದಾರೆ.
ಕಳೆದ ರಾತ್ರಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ 7.30ರ ಸುಮಾರಿಗೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್ನಲ್ಲಿ ಬಂದಿಳಿದಿದ್ದರು.
ಅರಣ್ಯ ಇಲಾಖೆ ದಿರಿಸಿನಲ್ಲಿ ಮಿಂಚಿದ ನಮೋ.. ವಿಶೇಷ ಹೆಲಿಕಾಪ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿದ್ದರು. ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್ ಅನ್ನು ಮೋದಿ ಧರಿಸುವ ಮೂಲಕ ಮಿಂಚಿದ್ದಾರೆ.
ಈ ವೇಳೆ ಅಂಚೆ ಚೀಟಿ ಬಿಡುಗಡೆ, ಬಂಡೀಪುರದಲ್ಲಿ ಹಳೇ ಸಫಾರಿ ಕೇಂದ್ರದ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಸರಿಸುಮಾರು 15 ಕಿ.ಮೀ ಸಫಾರಿ ನಡೆಸಲಿದ್ದಾರೆ. ಬೋಳಗುಡ್ಡ ಎಂಬ ಎತ್ತರದ ಪ್ರದೇಶಕ್ಕೆ ಏರಿ ಇಡೀ ಅರಣ್ಯ ಪ್ರದೇಶವನ್ನು ಕಣ್ತುಂಬಿಕೊಳ್ಳಲ್ಲಿರುವ ಮೋದಿ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವೂ ಬಂದ್ ಆಗಿದ್ದು, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ. ಮೈಸೂರಿನಲ್ಲಿ ಹುಲಿ ಗಣತಿ ಅಂಕಿ-ಅಂಶ ಬಿಡುಗಡೆ ಮಾಡಲಿರುವ ಮೋದಿ, ಈ ಬಾರಿ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ1 ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳ ಟಾಪ್ ರ್ಯಾಂಕಿನಲ್ಲಿ ಬಂಡೀಪುರ ನಂ 1 ಸ್ಥಾನ ಗಳಿಸುವ ನಿರೀಕ್ಷೆ ಇದೆ. ಮೋದಿ ಸಫಾರಿ ವೇಳೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್, ಅರಣ್ಯಾಧಿಕಾರಿಗಳು ಭಾಗಿಯಾಗಲಿದ್ದಾರೆ.