ಸಾಮಾಜಿಕ ಬಹಿಷ್ಕಾರಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ ಚಾಮರಾಜನಗರ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯಡವನಳ್ಳಿ ಗ್ರಾಮದ ವೈ.ಎಸ್.ಶಿವರಾಜು(45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಘಟನೆ ಸಂಬಂಧ ಮೃತನ ಸಹೋದರ ಮಹೇಶ್ ಎಂಬುವರು ಬೇಗೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಯಡವನಹಳ್ಳಿ ಗ್ರಾಮದ ಯಜಮಾನರಾದ ಕೃಷ್ಣ, ಚಂದು, ರೇವನಾಯಕ, ಸಂತೋಷ್, ಸಂದೇಶ್, ವೆಂಕಟರಮಣ ನಾಯಕ, ನಿಂಗ ನಾಯಕ, ಚಿಕ್ಕಬೆಳ್ಳ ನಾಯಕ, ಆಲತ್ತೂರು ಮಹದೇವ ನಾಯಕ, ಡಿ.ಮಹದೇವಮ ನಾಯಕ, ದೇವನಾಯಕ, ಚಿನ್ನಸ್ವಾಮಿ ನಾಯಕ, ರಂಗಸ್ವಾಮಿ ನಾಯಕ ಎಂಬ 13 ಮಂದಿ ವಿರುದ್ಧ ಬೇಗೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಂಬಂಧಿಕರಿಂದ ಪ್ರತಿಭಟನೆ: ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಗ್ರಾಮಸ್ಥರು ಮತ್ತು ಸಂಬಂಧಿಕರು ಬೇಗೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಬಂಧಿಸುತ್ತೇವೆ, ತನಿಖೆ ಕೈಗೊಂಡು ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಜಿಲ್ಲೆಯ ಇತರೆ ಸುದ್ದಿಗಳು ಇಲ್ಲಿವೆ: ಉಯ್ಯಾಲೆ ಆಡುವಾಗ ಆಯತಪ್ಪಿ ಬಿದ್ದು ಶಿಕ್ಷಕಿ ಸಾವು..ಕೊಳ್ಳೇಗಾಲ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ ಉಯ್ಯಾಲೆಯಲ್ಲಿ ಆಟ ಆಡುತ್ತಿದ್ದ ಶಿಕ್ಷಕಿ ಕೆ.ಪುಟ್ಟಿ(53) ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಪುಟ್ಟಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಸಂಘದ ತಾಲೂಕು ಅಧ್ಯಕ್ಷರು ಕೂಡ ಆಗಿದ್ದರು. ಮಂಗಳವಾರ ಸಂಜೆ ಮನೆಯ ಮೇಲೆ ಉಯ್ಯಾಲೆ ಆಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಶಿಕ್ಷಕಿ ಕೆಳಗೆ ಬಿದ್ದಿದ್ದರು. ತಕ್ಷಣವೇ ಮನೆಯವರು ಅವರನ್ನು ಮೇಲೆತ್ತಿ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ರಾತ್ರಿ ಶಿಕ್ಷಕಿ ಮೃತಪಟ್ಟಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಡು ಕುರಿ ಬೇಟೆಯಾಡಿದ್ದನ ಬಂಧನ:ಕಾಡು ಕುರಿಯನ್ನು ಬೇಟೆ ಆಡಿ ಮಾಂಸ ಮಾರಾಟ ಮಾಡಲು ಯತ್ನಿಸುವಾಗ ವ್ಯಕ್ತಿ ಸಿಕ್ಕಿ ಬಿದ್ದಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲೂಕಿನ ಜಾಗೇರಿಯ ದೋಮಿದೀನ್ ಬಂಧಿತ ಆರೋಪಿ. ಜಾಗೇರಿ ಅರಣ್ಯ ಪ್ರದೇಶದಲ್ಲಿ ಈತ ಕಾಡು ಕುರಿ ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಅಪಘಾತ ಮಾಡಿಸಿ ವ್ಯಕ್ತಿಯ ಹತ್ಯೆ ಪ್ರಕರಣ; ಇಬ್ಬರು ಪೊಲೀಸ್ ವಶಕ್ಕೆ