ಚಾಮರಾಜನಗರ: ರಾಜ್ಯದ ಇತರ ಜಿಲ್ಲೆಗಳಲ್ಲಿ ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದ್ದರೂ ಗಡಿಜಿಲ್ಲೆ ಜನರು ಮಾತ್ರ ಕಳೆದ ವರ್ಷ ಬಿಯರ್ ನತ್ತ ಕಣ್ಣೆತ್ತಿಯೂ ನೋಡಿಲ್ಲ.
ಹೌದು, ಗುಂಡ್ಲುಪೇಟೆ ಹೊರತು ಪಡಿಸಿದಂತೆ ಚಾಮರಾಜನಗರ ಮತ್ತು ಕೊಳ್ಳೇಗಾಲ ತಾಲೂಕು ಭಾಗಗಳಲ್ಲಿ 2018 ಕ್ಕಿಂತ 2019ರಲ್ಲಿ ಬಿಯರ್ ಮಾರಾಟ ಕಡಿಮೆಯಾಗಿದ್ದು, ಲಿಕ್ಕರ್ ಮಾರಾಟ ಹೆಚ್ಚಾಗಿದೆ. ಆದರೆ, ಗುಂಡ್ಲುಪೇಟೆ ಭಾಗದಲ್ಲಿ 2019 ರಲ್ಲಿ ಲಿಕ್ಕರ್ ಜೊತೆಗೆ ಬಿಯರ್ ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ.
ಚಾಮರಾಜನಗರ ಭಾಗದಲ್ಲಿ 2,81,871 ಕೇಸ್ ಲಿಕ್ಕರ್ ಸೇಲಾಗಿದ್ದು, 2018ಕ್ಕೆ ಹೋಲಿಸಿದರೆ 8597 ಕೇಸ್ ಹೆಚ್ಚಾಗಿದೆ. ಕೊಳ್ಳೇಗಾಲ ಭಾಗದಲ್ಲಿ 2,78,095 ಮದ್ಯ ಬಾಕ್ಸ್ಗಳು ಮಾರಾಟವಾಗಿದ್ದು ಹಿಂದಿನ ವರ್ಷಕ್ಕಿಂತ 13,352 ಕೇಸ್ ಹೆಚ್ಚಾಗಿದೆ. ಇನ್ನು, ಗುಂಡ್ಲುಪೇಟೆ ತಾಲೂಕಿನಲ್ಲಿ 1,47,891 ಕೇಸ್ ಬಿಕರಿಯಾಗಿದ್ದು, ಹಿಂದಿನ ವರ್ಷಕ್ಕಿಂತ 16,724 ಕೇಸ್ ಹೆಚ್ಚು ಮಾರಾಟವಾಗಿದೆ.
ಚಾಮರಾಜನಗರದಲ್ಲಿ ಬಿಯರ್ ಖರೀದಿಸದ ಜನ ಒಟ್ಟಾರೆಯಾಗಿ ಜಿಲ್ಲಾದ್ಯಂತ ಏಪ್ರಿಲ್-2019ರಿಂದ ಡಿಸೆಂಬರ್-2019 ರವರೆಗೆ 4,25,986 ಕೇಸ್ ಲಿಕ್ಕರ್ ಮಾರಾಟವಾಗಿದ್ದು, 30,076 ಕೇಸ್ ಮದ್ಯ ಹೆಚ್ಚುವರಿಯಾಗಿ 2019ರಲ್ಲಿ ಮಾರಾಟವಾಗಿದೆ.
ಬಿಯರ್ಗಿಲ್ಲ ಬೇಡಿಕೆ:ಲಿಕ್ಕರ್ ಮಾರಾಟದಲ್ಲಿ ಏರಿಕೆ ಕಂಡಿದ್ದರೂ ಗಡಿಜಿಲ್ಲೆಯಲ್ಲಿ ಬಿಯರ್ ಮಾರಾಟದಲ್ಲಿ ಕುಸಿತ ಕಂಡಿದೆ. 57,653 ಕೇಸ್ ಬಿಯರ್ ಚಾಮರಾಜನಗರದಲ್ಲಿ ಮಾರಾಟವಾಗಿದ್ದು, ಹಿಂದಿನ ವರ್ಷಕ್ಕಿಂತ 237 ಕೇಸ್ ಕಡಿಮೆಯಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ 61,395 ಕೇಸ್ ಬಿಕರಿಯಾಗಿದ್ದು, ಹಿಂದಿನ ವರ್ಷಕ್ಕಿಂತ 4530 ಕೇಸ್ ಕಡಿಮೆ ವಹಿವಾಟಾಗಿದೆ. ಆದರೆ, ಗುಂಡ್ಲುಪೇಟೆ ತಾಲೂಕಿನ ಲಿಕ್ಕರಿನಂತೆ ಬಿಯರ್ ಮಾರಾಟದಲ್ಲೂ ಏರಿಕೆಯಾಗಿದ್ದು, 36,641 ಕೇಸ್ ಬಿಕರಿಯಾಗಿದ್ದು ಹಿಂದಿನ ವರ್ಷಕ್ಕಿಂತ 6,849 ಕೇಸ್ ಹೆಚ್ಚು ಮಾರಾಟವಾಗಿದೆ.