ಗುಂಡ್ಲುಪೇಟೆ: ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲು ಬಿಜೆಪಿ ಶಾಸಕ ಸಿ.ಎಸ್. ನಿರಂಜನಕುಮಾರ ಪಿಡಿಒಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್ ಅಧಿಕಾರ ಹಿಡಿಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಧುಶಂಕರ ಎಸ್.ಎಸ್. ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಫಲಾನುಭವಿಗಳಿಗೆ ನೀಡಿರುವ ಮನೆಗಳ ಕಾರ್ಯವೇ ಸಂಪೂರ್ಣವಾಗಿಲ್ಲ. ಹೀಗಿರುವಾಗ ವಸತಿ ಸಚಿವ ವಿ. ಸೋಮಣ್ಣ ಅವರ ಲೆಟರ್ ಹೆಡ್ ಬಳಸಿ ಮತದಾರರಿಗೆ ಮನೆ ನೀಡುವ ಆಮಿಷವೊಡ್ಡುತ್ತಿದ್ದಾರೆ. ಒಂದು ಗ್ರಾಮ ಪಂಚಾಯತ್ಗೆ ಶಾಸಕರ ಕೋಟಾದಡಿ 20 ಮನೆ ನೀಡುವುದಾಗಿ ಹಾಗೂ ಮನೆಗಳನ್ನು ಶಾಸಕರೇ ಆಯ್ಕೆ ಮಾಡುತ್ತಾರೆ ಎಂದು ಬಿಜೆಪಿ ಮುಖಂಡರು ಕೆಲ ಪಿಡಿಒಗಳ ಮೂಲಕ ಗ್ರಾಮಗಳಲ್ಲಿ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಎರಡು ಮೂರು ವರ್ಷದಿಂದ ಮನೆ ಕೊಟ್ಟಿರೋರಿಗೆ ಸರ್ಕಾರ ಇನ್ನೂ ಸಹ ಹಣ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಮತದಾರರನ್ನು ವಂಚಿಸುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.