ರಾಷ್ಟ್ರೀಯ ಶಿಕ್ಷಣ ನೀತಿ, ಹಿಂದಿ ಹೇರಿಕೆ ವಿರುದ್ಧ ಚಿಂತಕ ಪ.ಮಲ್ಲೇಶ್ ಕಿಡಿ - ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಪ.ಮಲ್ಲೇಶ್ ಕಿಡಿ
ರಾಜ್ಯ ರೈತ ಸಂಘದ ಗತ್ತು ಮೊದಲಿನಂತೆ ಉಳಿದಿದ್ದರೇ ಒಡೆದು ಇಬ್ಭಾಗವಾಗದಿದ್ದರೆ ಜೊತೆಗೆ ಸಮಾಜವಾದಿ ಹೋರಾಟ, ದಲಿತ ಸಂಘಟನೆಗಳು ಒಗ್ಗಟ್ಟಾಗದಿದ್ದರೆ ಇಂದು ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಇರುತ್ತಿರಲಿಲ್ಲ, ರೈತರೇ ರಾಜ್ಯ ಆಳುತ್ತಿದ್ದರು..
ಚಿಂತಕ ಪ.ಮಲ್ಲೇಶ್ ಕಿಡಿ
ಚಾಮರಾಜನಗರ :ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಹಿಂದಿ ಹೇರಿಕೆ ವಿರುದ್ಧ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಕಟುವಾಗಿ ಟೀಕಿಸಿದರು.
ಹಿಂದಿಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ಎರಡೇ ಸಾಕು ಎಂಬ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ, ನಮ್ಮ ಮಾತೃಭಾಷೆ ಜೊತೆಗೆ ಚಕ್ಕಂದ ಆಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಎಲ್ಲ ಮಹನೀಯರಿಗೂ ಗೊತ್ತು ಸಂವಿಧಾನದಲ್ಲಿ ಏನಿದೆ ಎಂದು, ಇಂಗ್ಲಿಷ್ ರಾಷ್ಟ್ರಭಾಷೆ ಅಲ್ಲ. ಆದರೆ, ಅದಕ್ಕೆ ರಾಷ್ಟ್ರಭಾಷೆ, ಮಾತೃಭಾಷೆಗಿಂತ ಹೆಚ್ಚು ಒತ್ತು ನೀಡಲಾಗಿದೆ. ರೈತನ ಮಕ್ಕಳು ಏನು ಓದಬೇಕು, ಎಂಬಿಬಿಎಸ್ ಮಾಡಿ ವ್ಯವಸಾಯವನ್ನು ಬಿಡಬೇಕೆ, ಇಂತಹ ಪ್ರಮುಖ ಸಮಸ್ಯೆ ಇರಬೇಕಾದರೇ ಮೋದಿಯವರು ರೈತರ ಮಗ ಏನು ಓದಬೇಕೆಂದು ಚಿಂತಿಸಿಲ್ಲ ಎಂದು ಕಿಡಿಕಾರಿದರು.
ಈ ದೇಶ ಹೀಗಾಗಲು ಗಾಂಧಿಯಲ್ಲ ನೆಹರು ಕಾರಣ. ಹಳ್ಳಿಗಳಿಂದ ಭಾರತವನ್ನು ಕಟ್ಟಬೇಕೆಂಬ ಮಹಾತ್ಮ ಗಾಂಧಿ ಒತ್ತಾಸೆ ಈಡೇರಿದ್ರೆ ಇಂದು ಸಂಘಟನೆಗಳೇ ಬೇಕಿರಲಿಲ್ಲ. ಭಾರತವನ್ನು ಹಳ್ಳಿಗಳಿಂದ, ರೈತರಿಂದ ಕಟ್ಟಬೇಕಿತ್ತು ಎಂದು ಅಭಿಪ್ರಾಯಪಟ್ಟರು. ರಾಜ್ಯ ರೈತ ಸಂಘದ ಗತ್ತು ಮೊದಲಿನಂತೆ ಉಳಿದಿದ್ದರೇ ಒಡೆದು ಇಬ್ಭಾಗವಾಗದಿದ್ದರೆ ಜೊತೆಗೆ ಸಮಾಜವಾದಿ ಹೋರಾಟ, ದಲಿತ ಸಂಘಟನೆಗಳು ಒಗ್ಗಟ್ಟಾಗದಿದ್ದರೆ ಇಂದು ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಇರುತ್ತಿರಲಿಲ್ಲ, ರೈತರೇ ರಾಜ್ಯ ಆಳುತ್ತಿದ್ದರು ಎಂದರು. ವೇದಿಕೆಯಲ್ಲಿ ಸಚಿವರುಗಳಾದ ಸುರೇಶ್‌ಕುಮಾರ್ ಹಾಗೂ ಎಸ್ ಟಿ ಸೋಮಶೇಖರ್, ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ನಿರಂಜನಕುಮಾರ್ ಹಾಗೂ ಇನ್ನಿತರರಿದ್ದರು.