ಚಾಮರಾಜನಗರ:ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿರಾಯನ ಸೆರೆಗೆ ಅರಣ್ಯ ಇಲಾಖೆ ಸರ್ವ ಪ್ರಯತ್ನ ನಡೆಸಿದ್ದು, ಮನುಷ್ಯರನ್ನು ಬಲಿಪಡೆದ ಹುಲಿಯನ್ನು ಈಗಾಗಲೇ ಇಲಾಖೆ ಗುರುತಿಸಿದೆ.
ಆಪರೇಷನ್ ನರಹಂತಕ ಮತ್ತಷ್ಟು ಚುರುಕು: ಮತ್ತೊಂದೆಡೆ ಮರಿಗಳೊಂದಿಗೆ ವ್ಯಾಘ್ರ ದರ್ಶನ! ಹುಂಡೀಪುರದ ಕೆಲವು ಜಮೀನಿಗಳಲ್ಲಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿರುವ ಅರಣ್ಯ ಇಲಾಖೆ ನರಹಂತಕನ ಸೆರೆಗೆ ನಕ್ಸಲ್ ನಿಗ್ರಹ ಪಡೆ ಬಳಸುವ ಅತ್ಯಾಧುನಿಕ ಬೈನಾಕುಲರ್ ಅನ್ನು ಇಂದು ಬಳಸಲಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ. ಹುಲಿ ಕಾರ್ಯಾಚರಣೆಯಲ್ಲಿ ನಿಪುಣನಾಗಿರುವ ಗಣೇಶ ಮತ್ತು ಅಭಿಮನ್ಯು ಆನೆಯೂ ವ್ಯಾಘ್ರನ ಸೆರೆಗಾಗಿ ಕೂಂಬಿಂಗ್ ನಡೆಸಿದ್ದು, ಮತ್ತಿಬ್ಬರು ಶಾರ್ಪ್ ಟ್ರಾಂಕಲೈಸರು ಬರಲಿದ್ದು, ಹುಲಿ ಈಗಾಗಲೇ ಪತ್ತೆಯಾಗಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ಬಾಲಚಂದ್ರ ತಿಳಿಸಿದ್ದಾರೆ.
ಆಪರೇಷನ್ ಟೈಗರ್ಗೆ 6 ಆನೆ, 200 ಕ್ಯಾಮರಾ ಬಳಕೆ: ವದಂತಿಗಳಿಂದ ಹೆಚ್ಚಿದ ಆತಂಕ
ಇನ್ನು, ಕಾರ್ಯಾಚರಣೆ ಹೆಸರಲ್ಲಿ ಅರಣ್ಯ ಇಲಾಖೆ ಕೇವಲ ಕಾಲಹರಣ ಮಾಡುತ್ತಿದ್ದು, ಒಬ್ಬರಿಗೊಬ್ಬರಿಗೆ ಹೊಂದಾಣಿಕೆಯೇ ಇಲ್ಲದಂತಾಗಿದೆ. ಹುಲಿ ಭಯಕ್ಕೆ ಕೂಲಿಯಾಳುಗಳು ಬಾರದೇ ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ, ಯಾರೊಬ್ಬರೂ ಬೆಳೆ ಕಾಯಲು ತೆರಳುತ್ತಿಲ್ಲ, ಬೆಳೆದ ಬೆಳೆಯನ್ನೂ ಕಟಾವು ಮಾಡಲಾಗುತ್ತಿಲ್ಲ ಎಂದು ಹುಂಡಿಪುರ ಗ್ರಾಮಸ್ಥ ಮಹೇಂದ್ರ ಕಿಡಿಕಾರಿದ್ದಾರೆ.
ಹುಂಡಿಪುರದಲ್ಲಿ ರೈತನ ಕೊಂದ ಹುಲಿ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಓಂಕಾರ ಅರಣ್ಯ ವಲಯದ ಬೇಗೂರು ಸಮೀಪದ ಹಂಚಿಪುರದ ಬಾಳೆತೋಟವೊಂದರಲ್ಲಿ ನಾಲ್ಕು ಹುಲಿಗಳು ದರ್ಶನ ನೀಡಿದೆ. 3 ಮರಿಗಳೊಂದಿಗೆ ತಾಯಿ ಹುಲಿ ಬಾಳೆತೋಟದಲ್ಲಿ ಕಾಣಿಸಿಕೊಂಡಿದೆ. ಕೊನೆಗೆ, ಓಂಕಾರ ಅರಣ್ಯ ವಲಯದ ಸಿಬ್ಬಂದಿ ತಮಟೆ, ಪಟಾಕಿ ಸದ್ದಿನ ಮೂಲಕ ಕಾಡಿಗೆ ಓಡಿಸಿದ್ದಾರೆ. ಮಳೆ ಬಿದ್ದಿರುವುದರಿಂದ ಹುಲಿ ಯಾವ ದಿಕ್ಕಿನತ್ತ ತೆರಳಿದೆಯೆಂದು ತಿಳಿದಿಲ್ಲ, ಹುಲಿ ಪತ್ತೆಗೆ ಅಧಿಕಾರಿಗಳು ಇಂದು ಪರಿಶೀಲಿಸಲಿದ್ದಾರೆ.