ಚಾಮರಾಜನಗರ: ಘನವೆತ್ತ ರಾಷ್ಟ್ರಪತಿಗಳಿಂದ ಉದ್ಘಾಟನೆಗೊಂಡು ಸ್ಮರಣೀಯ ಆಸ್ಪತ್ರೆ ಉದ್ಘಾಟನೆ ಎನಿಸಿಕೊಂಡಿದ್ದ ಸಿಮ್ಸ್ ನೂತನ ಆಸ್ಪತ್ರೆ ಈಗ ಬಡವರಿಗೆ ದೂರವಾಗಿದೆ, ಅಕ್ಷರಶಃ ಖಾಸಗಿ ಕ್ಲಿನಿಕ್ ಗಳಿಗೆ ವರವಾಗಿ ಪರಿಣಮಿಸಿದೆ.
ಬಡವರಿಗೆ ದೂರವಾಯ್ತು ಚಾಮರಾಜನಗರ ಜಿಲ್ಲಾಸ್ಪತ್ರೆ ಹೌದು..., ಇದು ವಿಪರ್ಯಾಸವಾದರೂ ಸತ್ಯ. 450 ಹಾಸಿಗೆ ಸಾಮರ್ಥ್ಯದ ನೂತನ ಸಿಮ್ಸ್ ಆಸ್ಪತ್ರೆ ಇಂದಿನಿಂದ ಕಾರ್ಯಾರಂಭ ಮಾಡಿದ್ದರೂ, ಬಡವರಿಗೆ ಮಾತ್ರ ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲಾಗುತ್ತಿಲ್ಲ. ಜಿಲ್ಲಾ ಕೇಂದ್ರದಿಂದ 6 ಕಿಮೀ ದೂರದಲ್ಲಿರುವ ಎಡಬೆಟ್ಟದಲ್ಲಿ ಆಸ್ಪತ್ರೆ ಇರುವುದರಿಂದ ಅಲ್ಲಿಗೆ ಹೋಗಲು ಯಾವುದೇ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದೇ, ಖಾಸಗಿ ಕ್ಲಿನಿಕ್ ಗಳತ್ತ ಬಡಜನರು ಮುಖ ಮಾಡುತ್ತಿದ್ದು ಕ್ಲಿನಿಕ್ ಗಳಿಗೆ ಇದು ವರವಾಗಿ ಪರಿಣಮಿಸಿದೆ.
ಹೆರಿಗೆ ವಿಭಾಗ ಮತ್ತು ಕೋವಿಡ್ ವಾರ್ಡ್ ಹೊರತುಪಡಿಸಿ ಒಪಿಡಿ ಸೇರಿದಂತೆ ಎಲ್ಲ ವಿಭಾಗಗಳನ್ನು ಎಡಬೆಟ್ಟದ ನೂತನ ಆಸ್ಪತ್ರೆಗೆ ವರ್ಗಾಯಿಸಿರುವುದರಿಂದ ಹೊರರೋಗಿ ವಿಭಾಗಕ್ಕೆ ಬರುವವರು ಪರದಾಡುತ್ತಿದ್ದಾರೆ. ಆಟೋದಲ್ಲಿ ಹೋಗಬೇಕೆಂದರೆ 100-150 ರೂ. ಕೊಡಬೇಕಿದ್ದು, ಅದರ ಬದಲು ಖಾಸಗಿ ಕ್ಲಿನಿಕ್ ಗಳಲ್ಲೇ ಚಿಕಿತ್ಸೆ ಪಡೆಯಲು ಮುಗಿಬಿದ್ದಿದ್ದು ಮುಂದಿನ ದಿನಗಳಲ್ಲಿ ಬಡವರು ಸಿಮ್ಸ್ ಆಸ್ಪತ್ರೆಯ ಹೊರರೋಗಿ ವಿಭಾಗದಿಂದ ಶಾಶ್ವತವಾಗಿ ದೂರವಾಗುವ ಲಕ್ಷಣ ಗೋಚರಿಸುತ್ತಿದೆ.
ಡ್ರೆಸ್ಸಿಂಗ್ ಮಾಡಿಸಲು 300 ₹ ಆಟೋ ಬಾಡಿಗೆ: ಕೆಲ ತಿಂಗಳುಗಳ ಹಿಂದೆ ಅಪಘಾತಗೊಂಡಿದ್ದ ಸರೋಜಮ್ಮ ಈಟಿವಿ ಭಾರತದೊಂದಿಗೆ ಮಾತನಾಡಿ, ಈಗ ಗಾಯವೆಲ್ಲಾ ಬಹುಪಾಲು ವಾಸಿಯಾಗಿದ್ದು ವಾರಕ್ಕೊಮ್ಮೆ ಡ್ರೆಸ್ಸಿಂಗ್ ಮಾಡಿಸಿಕೊಳ್ಳುತ್ತಿದೆ. ಇಂದು ಒಪಿಡಿಯನ್ನು ಎಡಪುರಕ್ಕೆ ಸ್ಥಳಾಂತರಿಸಿದ್ದು ಅಲ್ಲಿಗೆ ಹೋಗಬೇಕೆಂದರೆ 300 ಆಟೋ ಬಾಡಿಗೆ ಕೊಡಬೇಕು, 300 ರೂ. ಕೊಟ್ಟು ಡ್ರೆಸ್ ಮಾಡಿಸಿಕೊಳ್ಳುವುದು ಹೇಗೆ..!? ಅದರ ಬದಲು 100 ರೂ. ಕೊಟ್ಟು ಇಲ್ಲೇ ಖಾಸಗಿ ಕ್ಲಿನಿಕ್ ನಲ್ಲಿ ಡ್ರೆಸ್ಸಿಂಗ್ ಮಾಡಿಸಿಕೊಳ್ಳುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.
ಯಾವುದೇ ಬಸ್ ಸೌಲಭ್ಯವೂ ಇಲ್ಲದೇ ಸ್ವಂತ ವಾಹನ ಆಶ್ರಯಿಸಿ ನೂತನ ಆಸ್ಪತ್ರೆಗೆ ಹೋಗಬೇಕು, ಅಲ್ಲಿ ಹೋದರೆ ಹೋಟೆಲ್ ಗಳಿಲ್ಲ, ಸ್ವಂತ ವಾಹನ ಇಲ್ಲವೆಂದರೇ ಆಟೋದಲ್ಲಿ ಹೋಗಬೇಕಿದ್ದು ನೂರಿನ್ನೂರು ಬಾಡಿಗೆ ಕೇಳುತ್ತಾರೆ, ನೂತನ ಆಸ್ಪತ್ರೆ ನಿರ್ಮಾಣವಾಗಿರುವುದು ಸ್ವಾಗತಾರ್ಹ ಆದರೆ ಒಪಿಡಿ ಸ್ಥಳಾಂತರಿಸಿರುವುದು ಖಾಸಗಿ ಕ್ಲಿನಿಕ್ ಗಳಿಗೆ ವರವಾಗಿದೆ, ಒಪಿಡಿಯನ್ನು ಹಳೇ ಆಸ್ಪತ್ರೆಯಲ್ಲೇ ಉಳಿಸಿಕೊಂಡು ಸೇವೆ ನೀಡಿದರೆ ಬಡವರಿಗೆ ಸಹಕಾರಿ ಆಗಲಿದೆ ಎಂದು ಉಪ್ಪಾರ ಸಮುದಾಯದ ಯುವ ಮುಖಂಡ ಜಯಕುಮಾರ್ ಒತ್ತಾಯಿಸಿದರು.
ಸಾರಿಗೆ ಇಲಾಖೆಗೆ ಪತ್ರ:ರೋಗಿಗಳು ಪರದಾಟದ ಬಗ್ಗೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್ ಪ್ರತಿಕ್ರಿಯಿಸಿ, ಸಾರಿಗೆ ಇಲಾಖೆಗೆ ಪತ್ರ ಬರೆದು ಬಸ್ ಸೌಲಭ್ಯ ಕಲ್ಪಿಸಲು ಮನವಿ ಮಾಡಿಕೊಂಡಿದ್ದು, ಶೀಘ್ರ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಆದರೆ, ನೂತನ ಜಿಲ್ಲಾಸ್ಪತ್ರೆಯ ಆರಂಭದ ದಿನವೇ ಬಡ ರೋಗಿಗಳು ದೂರವಾಗಿ ಖಾಸಗಿ ಕ್ಲಿನಿಕ್ ನತ್ತ ಮುಖ ಮಾಡುತ್ತಿರುವುದಂತೂ ದಿಟ.