ಚಾಮರಾಜನಗರ: ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದ ರವಿಕುಮಾರ್ ಅವರಿಗೆ ಭಾರತದ ಮೇಲೆ ಅತೀವ ಪ್ರೀತಿ. ದೇಶದ ಬಗ್ಗೆ ಇಷ್ಟೊಂದು ಭಕ್ತಿ ಇರಿಸಿಕೊಂಡಿರುವ ಇವರು, ತಮ್ಮ ಮನೆಯ ಗೋಡೆಯಲ್ಲಿ ಭಾರತದ ಭೂಪಟವನ್ನು ಅರಳಿಸಿದ್ದಾರೆ. ಪ್ರತಿದಿನವೂ ಅದಕ್ಕೆ ನಮಿಸಿ, ವಾರಕ್ಕೊಮ್ಮೆ ಅದಕ್ಕೆ ಪೂಜೆ ಸಲ್ಲಿಸಿ ಭಾರತ ಮಂದಿರವನ್ನಾಗಿಸಿದ್ದಾರೆ.
ಗಾರೆ ಕೆಲಸ ಮಾಡುವ ರವಿಕುಮಾರ್ ಅವರಿಗೆ ದಿನವೂ ಸೈನಿಕರದ್ದೇ ಚಿಂತನೆ. ಭಾರತ ಮಾತೆಯ ಮೇಲೆ ಎಲ್ಲಿಲ್ಲದ ಭಕ್ತಿ. ದೇವರಿಗೆ ಕೈ ಮುಗಿದ ಕೂಡಲೇ ಭಾರತ ಮಾತೆಗೆ ನಮಿಸಿ, ಮುಂದಿನ ಕಾರ್ಯ ಮಾಡುವ ಅಪರೂಪದ ವ್ಯಕ್ತಿ ಇವರು.
ಲಾಕ್ಡೌನ್ ವೇಳೆಯಲ್ಲಿ ಕೆಲಸ ಇಲ್ಲದಿದ್ದಾಗ ಭಾರತ ಮಂದಿರ ಕಟ್ಟಬೇಕೆಂದು ಮನೆಗೋಡೆಯೊಂದನ್ನು ಕೆಡವಿ, ಹೊಸದಾಗಿ ಗೋಡೆ ನಿರ್ಮಿಸಿ ಭಾರತದ ಭೂಪಟ, ರಾಷ್ಟ್ರ ಧ್ವಜವನ್ನು ಅರಳಿಸಿದ್ದಾರೆ. ಸೇನೆಗೆ ಸೇರಬೇಕೆಂಬ ಹಂಬಲ ಕೈ ಗೂಡದಿದ್ದರೂ ಭಾರತದ ಮೇಲಿನ ಪ್ರೀತಿ ಒಂದು ಚೂರು ಕಡಿಮೆಯಾಗಿಲ್ಲ. ಭಾರತ ಭೂಪಟಕ್ಕೆ ಇವರು ನಮಿಸುವುದಷ್ಟೇ ಅಲ್ಲದೇ ಯಾವುದೇ ಕಾರ್ಯಕ್ಕೆ ತೆರಳಬೇಕಾದರೂ ದೇಶವನ್ನೊಮ್ಮೆ ನೆನೆಯುತ್ತಾರೆ.
ಮನೆಯಲ್ಲೊಂದು ಭಾರತ ಮಾತೆಯ ಮಂದಿರ ವೃತ್ತಿಯಲ್ಲಿ ಗಾರೆ ಕೆಲಸದವರಾಗಿದ್ದರೂ ಇವರ ದೇಶಪ್ರೇಮ ಎಲ್ಲರಿಗಿಂತಲೂ ಹೆಚ್ಚು. ಇವರನ್ನು ನೋಡಿದರೆ ಜನರಿಗೆ ಖುಷಿ ಹಾಗೂ ಅಭಿಮಾನ ಹೆಮ್ಮೆಯಾಗುತ್ತೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ಆಚರಿಸಿದ್ದು, ಇವರು ಪ್ರತಿವರ್ಷ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು.
ಸೈನಿಕರ ಸ್ಮಾರಕವನ್ನು ಸ್ವಂತ ಹಣದಲ್ಲಿ ನಿರ್ಮಿಸಬೇಕು. ಅದು ಭಾರತದ ನಕ್ಷೆಯಂತೆ ಇರಬೇಕೆಂಬ ಆಸೆಯನ್ನು ರವಿ ಇಟ್ಟುಕೊಂಡಿದ್ದಾರೆ. ಪ್ರಾಥಮಿಕ ಶಾಲೆಯನ್ನಷ್ಟೇ ಕಲಿತಿರುವ ಇವರು, ಉನ್ನತ ವ್ಯಾಸಂಗ ಮಾಡಿ ದೇಶದ ಬಗ್ಗೆ ಅಸಡ್ಡೆ ತೋರುವವರಿಗೆ ಮಾದರಿಯಾಗಿದ್ದಾರೆ. ಶಿಕ್ಷಣ ಇಲ್ಲದಿದ್ದರೂ ಸಂಸ್ಕಾರವಂತರಾಗಿ ದೇಶದ ಬಗ್ಗೆ ಕಾಳಜಿ ಹೊಂದಿರುವ ರವಿ ಅವರಿಗೆ ನಿಜಕ್ಕೂ ಒಂದು ಸಲಾಂ ಹೇಳದಿರಲಾಗದು.