ಚಾಮರಾಜನಗರ:ನರೇಂದ್ರ ಮೋದಿ 2.0 ನಲ್ಲಿ 100 ದಿನ ಪೂರೈಸಿದ್ದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸಪ್ರಸಾದ್ ಜಿಲ್ಲೆಯ ಅಭಿವೃದ್ಧಿಗೆ ತೆಗೆದುಕೊಂಡ ಕ್ರಮಗಳೇನು ಎಂಬುದರ ಕುರಿತ ವರದಿ ಇಲ್ಲಿದೆ.
ಸಂಸದ ವಿ. ಶ್ರೀನಿವಾಸ ಪ್ರಸಾದ್ ಮಾಡಿದ ಕೆಲಸಗಳೇನು..? ಚಾಮರಾಜನಗರದಲ್ಲಿ ಬಾರಿ ಕಮಲ ಅರಳಿದರೂ ಮೋದಿ ಹೇಳುವ ತೀವ್ರಗತಿಯ ಅಭಿವೃದ್ಧಿ ಮೂರು ತಿಂಗಳಿನಲ್ಲಿ ಏನು ಆಗಿಲ್ಲ, ಸಂಸದರು ಜಿಲ್ಲೆಗೆ ಭೇಟಿ ನೀಡಿರುವುದೇ ಕೇವಲ 5 ಬಾರಿ ಎಂಬುದು ಇಲ್ಲಿನ ಜನರ ಆರೋಪವಾಗಿದೆ.
ಮೋದಿ ಅಲೆಯಲ್ಲಿ ಗೆದ್ದಿರುವ ವಿ.ಶ್ರೀನಿವಾಸ ಪ್ರಸಾದ್ ಅವರು 3 ತಿಂಗಳಾದರೂ ಜಿಲ್ಲೆಗೆ ನಿರಂತರ ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳ ವರದಿ ತರಿಸಿಕೊಂಡಿಲ್ಲ. ಸಂಸದರ ಆದರ್ಶ ಗ್ರಾಮ, ಪ್ರಗತಿ ಪರಿಶೀಲನಾ ಸಭೆಯನ್ನೂ ಇದುವರೆಗೂ ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕ್ಷೇತ್ರದ ಜನರು ಅಭಿವೃದ್ಧಿ ಕಾಣುತ್ತಿಲ್ಲ. ಪ್ರಧಾನಿ ಮೋದಿ ಅವರು ತಮ್ಮ ಹೆಸರಿನ ಮೂಲಕ ಗೆದ್ದಿರುವ ಸಂಸದರಿಗೆ ಕಾರ್ಯನ್ಮೋಖರಾಗುವಂತೆ ಸೂಚಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಅರುಣ್ ಕುಮಾರ್ ಆಗ್ರಹಿಸಿದರು.
ಜಲಶಕ್ತಿ ಅಭಿಯಾನದ ಯೋಜನೆಗೆ ಗುಂಡ್ಲುಪೇಟೆ ತಾಲೂಕು ಸೇರ್ಪಡೆಯಾಗಿದೆ. ವಿ.ಶ್ರೀ ಅನುಭವಿ ರಾಜಕಾರಣಿಯಾಗಿದ್ದು ಪ್ರವಾಸೋದ್ಯಮ ಅಭಿವೃದ್ಧಿಗೆ ತಮ್ಮದೇ ಯೋಜನೆ ರೂಪಿಸಿದ್ದಾರೆ. ಸಂಸದರು ಬರುತ್ತಿಲ್ಲ- ಭೇಟಿ ನೀಡುತ್ತಿಲ್ಲ ಎಂಬುದು ಸರಿಯಲ್ಲ. ಜಿಲ್ಲೆಯಲ್ಲೇ ಇದ್ದರೆ ಪರಿಣಿತರ ಜೊತೆ ಚರ್ಚೆ ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವಿ.ಶ್ರೀ ಜಿಲ್ಲೆಯನ್ನು ಅಭಿವೃದ್ಧಿ ಮಾಡಿಯೇ ತೀರುತ್ತಾರೆ ಎಂದು ಬಿಜೆಪಿ ಮಾಜಿ ಶಾಸಕ ಗುರುಸ್ವಾಮಿ ಹೇಳಿದರು.
ಸಂಸದರ ಪ್ರತಿಕ್ರಿಯೆ: 100 ದಿನದಲ್ಲಿ ಮಾಡಿರುವ ಕಾರ್ಯ ಕುರಿತು ಸಂಸದ ವಿ.ಶ್ರೀನಿವಾಸಪ್ರಸಾದ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿ ಒಂದು ತಿಂಗಳು ಸಂಸತ್ ಕಲಾಪವೇ ನಡೆದಿದೆ. ಜಿಲ್ಲೆಗೆ ಆಗ್ರೋ ಇಂಡಸ್ಟ್ರಿಗಳನ್ನು ತರಲು ಯೋಜಿಸಲಾಗಿದ್ದು, 15 ದಿನದಲ್ಲಿ ಈ ಕುರಿತು ಸಭೆ ಕರೆಯುತ್ತೇನೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು ಟೂರಿಸಂ ಅಭಿವೃದ್ಧಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ಶೀಘ್ರವೇ ರೂಪುರೇಷೆ ತಯಾರಾಗಲಿದೆ ಎಂದರು.