ಚಾಮರಾಜನಗರ:ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಸ್ಮಶಾನದ ಮರವೊಂದರಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ನಡೆಸಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಿತು. ಗ್ರಾಮದ ಚೆನ್ನಪ್ಪ (60) ಸಾವಿಗೀಡಾದವರು. 14 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿವರ: ಕೊಂಗರಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಭಾನುವಾರ ಸಂಜೆ ಕುಟುಂಬಸ್ಥರು ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆಸಿ ಚಿತೆಗೆ ಬೆಂಕಿ ಹಚ್ಚುತ್ತಿದ್ದಂತೆ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ಗುಂಪು ದಾಳಿ ಮಾಡಿವೆ. ಚೆನ್ನಪ್ಪ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಅಸುನೀಗಿದರು. ಉಳಿದ ಹಲವರು ಹೋಲಿ ಕ್ರಾಸ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬರು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೋಮದ ಹೊಗೆಯಿಂದ ಹೆಜ್ಜೇನು ದಾಳಿ (ಹಿಂದಿನ ಪ್ರಕರಣಗಳು): ಬೆಂಗಳೂರಿನ ಆನೇಕಲ್ - ತಮಿಳುನಾಡು ರಸ್ತೆಯ ಸೋಲೂರು ಗಡಿಯಲ್ಲಿ ನೂತನವಾಗಿ ನಿರ್ಮಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಇಂಥದ್ದೇ ಘಟನೆ ನಡೆದಿತ್ತು. ದೇವಾಲಯದಲ್ಲಿ ಹೋಮ ನಡೆಸಲು ಮುಂದಾದ ಭಕ್ತ ವೃಂದ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ಗಮನಿಸಿರಲಿಲ್ಲ. ಹೀಗಾಗಿ ಹೋಮದ ಹೊಗೆಯಿಂದ ಕೆರಳಿದ ಹೆಜ್ಜೇನು ಭಕ್ತಾಧಿಗಳ ಮೇಲೆ ದಾಳಿ ಮಾಡಿತ್ತು. ಮುನಿಮಾರಪ್ಪ ಹಾಗೂ ಚಿಂಟು ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು.
ಹೊಲದಲ್ಲಿದ್ದ ರೈತರ ಮೇಲೆ ಜೇನು ದಾಳಿ:ಹೊಲದಲ್ಲಿ ದನ ಮೇಯಿಸುತ್ತಿದ್ದ ರೈತರ ಮೇಲೆ ಹಠಾತ್ ಹೆಜ್ಜೇನು ದಾಳಿ ಮಾಡಿ ಓರ್ವ ರೈತ ಸಾವನ್ನಪ್ಪಿದ್ದ ಘಟನೆ ಮೈಸೂರಿನಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆದಿತ್ತು. ಹೆಚ್.ಡಿ.ಕೋಟೆ ತಾಲೂಕಿನ ಹೊಸತೊರವಳ್ಳಿ ಮತ್ತು ಬೆಳಗನಹಳ್ಳಿ ಸಮೀಪದಲ್ಲಿ ರೈತರು ದನ ಮೇಯಿಸುತ್ತಿದ್ದರು. ಈ ವೇಳೆ ರೈತರ ಮೇಲೆ ಹೆಜ್ಜೇನು ಹುಳುಗಳ ಹಿಂಡು ದಾಳಿ ನಡೆಸಿದೆ. ಹೆಜ್ಜೇನು ಹುಳುಗಳು ಮೊದಲು ಚಿಕ್ಕಮಾಲೇಗೌಡ (65), ನಂತರ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಬೀರೇಗೌಡ ಮತ್ತು ಶಂಕರನಾಯ್ಕ ಎಂಬ ರೈತರ ಮೇಲೆ ದಾಳಿ ನಡೆಸಿದ್ದವು. ಮೂವರು ರೈತರನ್ನು ಆಸ್ಪತ್ರೆಗೆ ಸೇರಿಸಲು ಕರೆದುಕೊಂಡು ಹೋಗುವಾಗ, ಮಾರ್ಗಮಧ್ಯೆ ಚಿಕ್ಕಮಾಲೇಗೌಡ ತೀವ್ರbಾಗಿ ನಿತ್ರಾಣಗೊಂಡು ಸಾವನ್ನಪ್ಪಿದ್ದರು.
ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ: ಕೋಲಾರ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿ, ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೆಪ್ಟೆಂಬರ್ 8 ರಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳ ಕಟ್ಟಡದಲ್ಲಿದ್ದ ಹೆಜ್ಜೇನು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿತ್ತು. ಚೆಲ್ಲಾಪಿಲ್ಲಿಯಾಗಿ ಕಾಲ್ಕಿತ್ತ ಪ್ರತಿಭಟನಾಕಾರರಲ್ಲಿ ಕೆಲವರು ಜಿಲ್ಲಾಧಿಕಾರಿಗಳ ಕಚೇರಿಯೊಳಗೆ ನುಗ್ಗಿ ಹೆಜ್ಜೇನಿನಿಂದ ತಪ್ಪಿಸಿಕೊಂಡರೆ, ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಪೊಲೀಸರು, ಪತ್ರಕರ್ತರ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಜೇನು ದಾಳಿ ನಡೆಸಿತ್ತು. ದಾಳಿಗೊಳಗಾದ ಕಾರ್ಯಕರ್ತರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ:ಹೆಜ್ಜೇನು ದಾಳಿ.. ಇಬ್ಬರ ಸ್ಥಿತಿ ಗಂಭೀರ