ಚಾಮರಾಜನಗರ :ನಗರದ ರೈಲ್ವೆ ನಿಲ್ದಾಣದಲ್ಲಿದ್ದ ಹಳೇ ಟಿಕೆಟ್ ಕೌಂಟರ್ ಹಾಗೂ ಸ್ಟೇಷನ್ ಮಾಸ್ಟರ್ ಕೊಠಡಿಯಿದ್ದ ಕಟ್ಟಡವನ್ನು ಸಿಬ್ಬಂದಿ ವಸತಿಗೃಹ ನಿರ್ಮಿಸಲು ಕೆಡವಿ ಹಾಕಲಾಗಿದೆ. ಹತ್ತಿರ ನೂರು ವರ್ಷಗಳ ಅಂಚಿನಲ್ಲಿದ್ದ ಪುರಾತನ ಕಟ್ಟಡವೊಂದು ಮರೆಗೆ ಸರಿದಿದೆ.
ಸುಣ್ಣದ ಗಾರೆಯಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡಕ್ಕೆ ಮಂಗಳೂರು ಹೆಂಚಿನ ಛಾವಣಿ ಸೊಗಸಿನ ರೂಪ ಕೊಟ್ಟಿತ್ತು. ಹತ್ತಾರು ದಶಕಗಳ ಕಾಲ ಸಾವಿರಾರು ಪ್ರಯಾಣಿಕರು ತನ್ನೊಳಗೆ ಸೆಳೆದು ಅವರಿಚ್ಛೆಯ ಊರು ತಲುಪುವಂತೆ ಮಾಡಿದ್ದ ಕಟ್ಟಡ ಮರೆಗೆ ಸರಿದಿದೆ. ಅದೇ ಜಾಗದಲ್ಲಿ ವಸತಿ ಗೃಹದ ಕಾಂಕ್ರೀಟ್ ಕಟ್ಟಡವೊಂದು ತಲೆ ಎತ್ತಲಿದೆ ಎಂಬ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಕಟ್ಟಡ ನೆಲಸಮಕ್ಕೆ ಆಕ್ಷೇಪ :ಇನ್ನು, ಕಟ್ಟಡ ನೆಲಸಮವಾಗಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ. ಚಾಮರಾಜನಗರದ ಉದ್ಯಮಿ ಜಯಸಿಂಹ ಮಾತನಾಡಿ, ಹಳೇ ಕಟ್ಟಡ ನೋಡಲು ಬಹಳ ಚೆನ್ನಾಗಿತ್ತು. ಈಗ ಖಾಲಿ ಜಾಗ ನೋಡಲು ಇಷ್ಟ ಆಗುತ್ತಿಲ್ಲ. ರೈಲ್ವೆ ಇಲಾಖೆಯವರು ಅದನ್ನು ಉಳಿಸಿಕೊಂಡು ವಸ್ತು ಸಂಗ್ರಹಾಲಯ ರೀತಿ ಮಾಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.
ಅಂದು ಕಾಗದದ ರಟ್ಟಿನಲ್ಲಿ ಟಿಕೆಟ್ ಪಡೆಯುತ್ತಿದ್ದದ್ದು, ತಂದೆ-ತಾಯಿಯೊಟ್ಟಿಗೆ ಕಲ್ಲಿದ್ದಲು, ಡೀಸೆಲ್ ರೈಲಿನಲ್ಲಿ ಪ್ರಯಾಣಿಸುತ್ತಿದುದೆಲ್ಲವೂ ಹಳೇ ಕಟ್ಟಡ ಕಂಡಾಗ ನೆನಪಾಗುತ್ತಿತ್ತು. ಮಂಗಳೂರು ಹೆಂಚಿನ ಕಟ್ಟಡ ನೋಡುವುದೇ ಒಂದು ಸೊಗಸಾಗಿತ್ತು. ಈಗ ಕೆಡವಿ ಹಾಕಿದ್ದಾರೆ ಮುಂದೇನಾಗುವುದೋ ಎಂದು ಮೈಸೂರಿಗೆ ಪ್ರಯಾಣಿಸಲು ಬಂದಿದ್ದ ಹಿರಿಯ ನಾಗರಿಕರೋರ್ವರು ನೆನೆಪು ಬಿಚ್ಚಿಟ್ಟರು.