ಚಾಮರಾಜನಗರ :ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡಕ್ಕೆ ಅಡಿಪಾಯ ಹಾಕಿದ್ದಾರೆ ಎಂಬ ಪರಿಸರವಾದಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ನಟ ಗಣೇಶ್ ಅವರಿಗೆ ಬಂಡೀಪುರ ಸೂಕ್ಷ್ಮ ವಲಯ ಪರಿಸರ ಸಮಿತಿ ಸದಸ್ಯ ಕಾರ್ಯದರ್ಶಿ ನೊಟೀಸ್ ನೀಡಿದ್ದಾರೆ. ಮುಂದಿನ 7 ದಿನಗಳೊಳಗೆ ಸೂಕ್ತ ದಾಖಲಾತಿ ಒದಗಿಸಬೇಕು. ಅಲ್ಲಿಯವರೆಗೂ ಕಾಮಗಾರಿ ನಿಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಪರಿಸರವಾದಿಗಳ ಆಕ್ಷೇಪ: ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಜಕ್ಕಳ್ಳಿ ಗ್ರಾಮದ ಸರ್ವೇ ನಂ. 105ರಲ್ಲಿ 1.24 ಎಕರೆ ಜಮೀನು ಖರೀದಿಸಿರುವ ಗಣೇಶ್, ಸ್ವಂತ ವಾಸಕ್ಕೆ ಮನೆ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕುರಿತು ಹೇಳಿದ್ದರು. ಅರಣ್ಯ ಅಧಿಕಾರಿಗಳು 2022ರ ಜೂನ್ ತಿಂಗಳಿನಲ್ಲಿ ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಅನುಮತಿ ನೀಡಿದ್ದರು. ಆದರೆ ಈಗ ಆ ಜಾಗದಲ್ಲಿ ಜೆಸಿಬಿ ಮೂಲಕ ದೊಡ್ಡ ಮಟ್ಟದ ಕೆಲಸ ನಡೆಯುತ್ತಿದ್ದಾರೆ ಎನ್ನುವುದು ಪರಿಸರವಾದಿಗಳ ಆಕ್ಷೇಪವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆ ರೀತಿಯ ಕಟ್ಟಡಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಚ್ಚಳಿಕೆ ಪತ್ರ, ಕಂದಾಯ ದಾಖಲಾತಿ ಸೇರಿದಂತೆ ಜಮೀನಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಮುಂದಿನ ಏಳು ದಿನಗಳೊಳಗೆ ಸಲ್ಲಿಸುವಂತೆ ಗಣೇಶ್ ಅವರಿಗೆ ಸೂಚನೆ ನೀಡಿದ್ದಾರೆ.
ನೊಟೀಸ್ ವಿವರ: ಗಣೇಶ್ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿ ಗ್ರಾಮದ ಸರ್ವೆ ನಂಬರ್ 105ರಲ್ಲಿ 1 ಎಕರೆ ಮತ್ತು 24 ಗುಂಟೆ ಜಾಗದಲ್ಲಿ ವಾಸಕ್ಕೆ ಮನೆ ಮತ್ತು ತೋಟಗಾರಿಕೆಗೆ ಉದ್ದೇಶದಿಂದ ಸುತ್ತಲೂ ಕಾಂಪೌಂಡ್ ವಾಲ್ ನಿರ್ಮಾಣಕ್ಕೆ ಅನುಮತಿ ಕೋರಿ ಪ್ರಸಾವನೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯದ ಮಾನಿಟರಿಂಗ್ ಸಮಿತಿಯ ಸಭೆಯಲ್ಲಿ ಹಾಜರುಪಡಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಗಣೇಶ್ ಸಲ್ಲಿಸಿರುವ ದಾಖಲಾತಿಗಳು ನಕಲಿ ಎಂದು ಕಂಡುಬಂದಲ್ಲಿ ಯಾವುದೇ ಸೂಚನೆ ನೀಡದೇ ರದ್ದುಪಡಿಸಬಹುದು ಎಂಬ ಮುಚ್ಚಳಿಕೆಗೆ ಬರೆದುಕೊಟ್ಟಿದ್ದಾರೆ.
ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸುತ್ತಿವೆ. ಕುಂದುಕೆರೆ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಜೆಸಿಬಿ ಸಹಾಯದಿಂದ ನೆಲ ಸಮತಟ್ಟು ಮಾಡಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ತಯಾರಿ ನಡೆಸುತ್ತಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆ ಷರತ್ತುಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ.
ಸೂಕ್ಷ್ಮ ಪರಿಸರ ವಲಯದ ಸಮಿತಿಯಲ್ಲಿ ಹಾಗೂ ಕಚೇರಿಗೆ ನೀಡಿರುವ ಪತ್ರದಲ್ಲಿ ಷರತ್ತುಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಇದರ ಜೊತೆಗೆ ಸಂಬಂಧಿಸಿದ ದಾಖಲೆಗಳನ್ನು ಕಂದಾಯ ಇಲಾಖೆ ಮತ್ತು ಸಂಬಂಧಿತ ಇಲಾಖೆಗೆ ನೀಡಬೇಕು. ಪತ್ರ ತಲುಪಿದ 7 ದಿನಗಳೊಳಗಾಗಿ ದಾಖಲೆಗಳನ್ನು ಒದಗಿಸಲು ಸೂಚಿಸಲಾಗಿದೆ.
ಇದನ್ನೂ ಓದಿ:Upendra: ಉಪೇಂದ್ರ ವಿರುದ್ಧದ ಮತ್ತೊಂದು FIRಗೆ ಹೈಕೋರ್ಟ್ ಮಧ್ಯಂತರ ತಡೆ