ಚಾಮರಾಜನಗರ : ಈಗಿನ ಕಾಲದಲ್ಲಿ ಯಾರು, ಹೇಗೆ, ಏನು ಎಂಬುದು ಗೊತ್ತಿರಲ್ಲ. ನಮ್ಮ ಕೈಯನ್ನೇ ಈಗ ನಮಗೆ ನಂಬಕ್ಕಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಫೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಯಾರೂ ಮಾಲೆ ಹಾಕಬೇಡಿ. ಚುನಾವಣೆಯಲ್ಲಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಅವರಿಗೆ ಗೆಲುವಿನ ಮಾಲೆ ಹಾಕಿ ಎಂದು ಹೇಳಿದರು. ರಾಜೀವ್ ಗಾಂಧಿ ಅವರನ್ನು ಹಾರ ಹಾಕುವಂತೆ ಬಂದು ಕೊಂದರು.
ಈಗಿನ ಕಾಲದಲ್ಲಿ ಯಾರನ್ನೂ ನಂಬಕ್ಕಾಗಲ್ಲ, ನಾವು ಬಹಳ ಹುಷಾರಾಗಿರಬೇಕು : ಡಿ ಕೆ ಶಿವಕುಮಾರ್ ಇಂದಿರಾ ಗಾಂಧಿ ಅವರನ್ನು ಗನ್ ಮ್ಯಾನ್ ಗುಂಡಿಟ್ಟು ಕೊಂದ. ಆದ್ದರಿಂದ ಯಾರನ್ನು ನಾವು ನಂಬುವಂತಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರುವವರೂ ಅಷ್ಟೇ ಮಾಲೆ ಎಲ್ಲ ತರಬೇಡಿ, ನನಗೂ ತರಬೇಡಿ, ಬಹಳ ಹುಷಾರಾಗಿರಬೇಕು ಎಂದು ಹೇಳಿದರು.
ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವ: ಯಡಿಯೂರಪ್ಪ ಹಾಗೂ ಬೊಮ್ಮಾಯಿ ಬಂದ ಬಳಿಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವ ಸರ್ಕಾರಿ ಕಚೇರಿಯ ಕದ ತಟ್ಟಿದರೂ ಸಾಕು ಅಧಿಕಾರಿಗಳು ಕಾಸು ಕಾಸು ಎಂದು ಲಂಚ ಕೇಳುತ್ತಾರೆ. ಕಮಿಷನ್ ಪಡೆಯುವುದು ಶೇ 40ರಷ್ಟಿಗೆ ತಲುಪಿದೆ ಎಂದು ಹೇಳಿದರು. ಇನ್ನು ಸರ್ಕಾರಿ ನೌಕರಿ ಪಡೆಯಲು 50 - 60 ಲಕ್ಷದಿಂದ 1 ಕೋಟಿ ಕೊಟ್ಟಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಉತ್ತರ ಪತ್ರಿಕೆಗಳೇ ಬದಲಾಗಿವೆ. ಕೋಟಿ ಕೊಟ್ಟು ಕೆಲಸ ತೆಗೆದುಕೊಂಡಾತ ಸುಮ್ಮನಿರುತ್ತಾನಾ ಎಂದು ಪ್ರಶ್ನಿಸಿದರು.
ಒಂದು ಕ್ಷೇತ್ರದಿಂದ ಕನಿಷ್ಠ 10 ಸಾವಿರ ಜನ ಬರಬೇಕು : ರಾಜ್ಯದಲ್ಲಿ ಗುಂಡ್ಲುಪೇಟೆ ಮಾರ್ಗದ ಮೂಲಕ ಜೋಡೋ ಯಾತ್ರೆ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ ಒಂದೊಂದು ಕ್ಷೇತ್ರಗಳಿಂದ ಕನಿಷ್ಠ 10 ಸಾವಿರ ಮಂದಿ ಕಾರ್ಯಕರ್ತರು ಭಾಗಿಯಾಗಬೇಕು. ಮದುವೆಗೆ ಕರೆದಂತೆ ಕರಪತ್ರ ಹಿಡಿದು ಜನರಿಗೆ ಈ ಯಾತ್ರೆ ವಿಚಾರ ಮುಟ್ಟಿಸಿ ಕರೆತನ್ನಿ ಎಂದು ಮುಖಂಡರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕೇರಳದ ಕಾಂಗ್ರೆಸ್ ಶಾಸಕ ರೋಸ್ ಜಾನ್ ಮತ್ತಿತರರು ಉಪಸ್ಥಿತರಿದ್ದರು. ಕೊಳ್ಳೇಗಾಲ ಕಾರ್ಯಕ್ರಮ ಬಳಿಕ ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಫೂರ್ವಭಾವಿ ಸಭೆ ನಡೆಯಿತು.
ಇದನ್ನೂ ಓದಿ :ಸಚಿವ ಶ್ರೀರಾಮುಲು ರಾಜೀನಾಮೆಗೆ ಆಗ್ರಹ: ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಎಎಪಿ