ಚಾಮರಾಜನಗರ:ಲಾಕ್ಡೌನ್ ಸಮಯದಲ್ಲಿ ಕೃಷಿ ಚಟುವಟಿಕೆಗಳಿಗೆ ಮುಕ್ತವಾಗಿ ಅವಕಾಶ ನೀಡಲಾಗಿದ್ದು, ರೈತರಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ: ಸಚಿವ ಬಿ.ಸಿ.ಪಾಟೀಲ್
ಕೃಷಿ ಚಟುವಟಿಕೆಗಳು, ಕೃಷಿಗೆ ಪೂರಕವಾದ ಮಳಿಗೆಗಳು, ಯಂತ್ರೋಪಕರಣಗಳ ಮಳಿಗೆಗಳಿಗೆ ಯಾವುದೇ ನಿರ್ಬಂಧ ವಿಧಿಸದಂತೆ ಡಿಸಿ, ಎಸ್ಪಿಗೆ ಸೂಚಿಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಚಟುವಟಿಕೆಗಳಿಗೆ, ಕೃಷಿಗೆ ಪೂರಕವಾದ ಮಳಿಗೆಗಳು, ಯಂತ್ರೋಪಕರಣಗಳ ಮಳಿಗೆಗಳಿಗೆ ಯಾವುದೇ ನಿರ್ಬಂಧ ವಿಧಿಸದಂತೆ ಡಿಸಿ, ಎಸ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಹೂವು ಬೆಳೆಯ ಸಮೀಕ್ಷೆ ನಡೆಸಿ ಅವರಿಗೆ ಸರ್ಕಾರ ಸಹಾಯ ಮಾಡಲಿದೆ. ಕಾಳ ಸಂತೆಯಲ್ಲಿ ಬಿತ್ತನೆ ಬೀಜ, ದವಸ ಧಾನ್ಯಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈಗಾಗಲೇ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದ ಕಿಸಾನ್ ಸಮ್ಮನ್ ಯೋಜನೆಯ ಹಣ 957 ಕೋಟಿ. ರೂ. ಬಿಡುಗಡೆಯಾಗಿದ್ದು, 49 ಲಕ್ಷ ರೈತರ ಖಾತೆಗೆ ಜಮೆಯಾಗಿದೆ ಎಂದು ಇದೇ ವೇಳೆ ತಿಳಿಸಿದರು.
ರೈತರಿಂದ ದೇಣಿಗೆ: ಚಾಮರಾಜನಗರ ತೆಂಗು ಬೆಳೆಗಾರರ ಸಂಘದಿಂದ ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಈ ಕುರಿತು ಬಿ.ಸಿ.ಪಾಟೀಲ್ ಮಾತನಾಡಿ, ಸಂಕಷ್ಟದ ಸಮಯದಲ್ಲೂ ರೈತರು ಹಣ ನೀಡಿರುವುದು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಅವರು ನೀಡಿರುವ ದೇಣಿಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.