ಚಾಮರಾಜನಗರ:ಇಲ್ಲಿನ ಡಿಸಿ, ಎಸ್ಪಿ ಅಷ್ಟೇ ಏಕೆ ಜಿಲ್ಲಾ ಪಂಚಾಯತ್ ಸಿಇಒ ಕೂಡ ಮಹಿಳೆಯರಾಗಿದ್ದಾರೆ. ಆದ್ರೆ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ಕಾಮುಕರನ್ನು ಈವರೆಗೆ ಬಂಧಿಸಿಲ್ಲವೆಂದು ಸಂತ್ರಸ್ತೆಯ ತಾಯಿ ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ನಾಲ್ವರು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಕಳೆದ ಡಿಸೆಂಬರ್ 6 ರಂದು ಬಾಲಕಿ ತಾಯಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೆ, ಘಟನೆ ನಡೆದು 25 ದಿನಗಳಾದರೂ ಆರೋಪಿಗಳಾದ ಅರಣ್ಯ ಇಲಾಖೆಯ ಗಾರ್ಡ್ ಶಿವಣ್ಣನಾಯಕ, ಯಡವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಾವಲುಗಾರ ಜವರನಾಯಕ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್, ಹೊಣಕನಪುರದ ನಾಗರಾಜು ಎಂಬುವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಲಕಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳೆಯರೇ ಉನ್ನತ ಅಧಿಕಾರಿಗಳಾಗಿದ್ರೂ ನೊಂದ ಬಾಲಕಿಗೆ ಇನ್ನೂ ನ್ಯಾಯ ಸಿಗದೇ ಇರುವುದು ವಿಪರ್ಯಾಸದ ಪರಿಸ್ಥಿತಿ ಉದ್ಭವವಾಯಿತೇ ಎಂಬ ಪ್ರಶ್ನೆ ನಗರದ ಜನರಲ್ಲಿ ಮೂಡಿದೆ.
ಎಎಸ್ಪಿ ಪ್ರತಿಕ್ರಿಯೆ:ಯಾವ ಕಾರಣಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ ಎಂದು ಅಧಿಕಾರಿಗಳನ್ನು ವಿಚಾರಿಸುತ್ತೇನೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರ ಪರ ಕೆಲಸ ಮಾಡುವುದಿಲ್ಲ. ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಸುಂದರರಾಜ್ ತಿಳಿಸಿದ್ದಾರೆ.