ಚಾಮರಾಜನಗರ :ಬಂಡೀಪುರದ ಬಳಿಕ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ದಿಂಬಂ ಘಟ್ಟಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜತೆಗೆ ಜನಾಭಿಪ್ರಾಯ ಸಂಗ್ರಹಿಸಲು ಕೂಡ ಸೂಚಿಸಿದೆ.
ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿರ್ಬಂಧ : ಪ್ರತಿಭಟನೆಗೆ ಮುಂದಾದ ಜನತೆ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ದಿಂಬಂ-ಬಣ್ಣಾರಿ ರಸ್ತೆಯಲ್ಲಿ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಮೃತಪಡುತ್ತಿರುವ ಹಿನ್ನೆಲೆ ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆ.10 ರಿಂದಲೇ ಜಾರಿಗೆ ಬರುವಂತೆ ಸಂಜೆ 6 ರಿಂದ ಬೆಳಗ್ಗೆ 6ವರೆಗೆ ವಾಹನ ಸಂಚಾರ ನಿರ್ಬಂಧಿಸಿ ವಿಭಾಗೀಯ ಪೀಠ ಆದೇಶಿಸಿದೆ.
ಇದೇ ವೇಳೆ, ವನ್ಯಜೀವಿಗಳ ರಕ್ಷಣೆಗೆ ವಾಹನ ಸಂಚಾರ ನಿರ್ಬಂಧವೇ ಅಂತಿಮ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ಜನಾಭಿಪ್ರಾಯವನ್ನು ಸಂಗ್ರಹಿಸುವಂತೆ ಈರೋಡ್ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದು, ಬುಧವಾರದಿಂದಲೇ ಅಲ್ಲಿನ ಡಿಸಿ ಜನಾಭಿಪ್ರಾಯ ಸಂಗ್ರಹಿಸಲಿದ್ದಾರೆ.
ಪ್ರತಿಭಟನೆಗೆ ಮುಂದಾದ ಜನತೆ :ಸಂಜೆಯ ನಂತರವೇ ಹೆಚ್ಚು ವಾಹನಗಳು ದಿಂಬಂ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಾತ್ರಿ ಸಂಚಾರ ನಿರ್ಬಂಧವಾದಾಗ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಲಿದೆ. ಜತೆಗೆ, ರೈತರು, ಹೋಟೆಲ್ ಹಾಗೂ ಮತ್ತಿತ್ತರು ವ್ಯಾಪಾರ-ವಹಿವಾಟಿಗೆ ಈ ನಿರ್ಬಂಧ ದೊಡ್ಡ ಹೊಡೆತ ಕೊಡಲಿದೆ ಎಂಬ ಮಾತುಗಳು ವ್ಯಕ್ತವಾಗಿದೆ.
ನಿರ್ಬಂಧದ ದಿನವೇ ಕನಿಷ್ಟ 10 ಸಾವಿರ ಮಂದಿ ರಾತ್ರಿ ಸಂಚಾರ ನಿರ್ಬಂಧದ ವಿರುದ್ಧ ಬಣ್ಣಾರಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಈಗಾಗಲೇ, ಸಿಪಿಐ ಪಾರ್ಟಿ ರಾತ್ರಿ ನಿರ್ಬಂಧ ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದೆ.
ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ (NH-958) ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶವನ್ನು ಹಾದು ಹೋಗಲಿದ್ದು,2012 ರಿಂದ 2021ರವರೆಗೆ ಮೂರು ಚಿರತೆಗಳು ಸೇರಿದಂತೆ 152 ಕಾಡು ಪ್ರಾಣಿಗಳು ಅಪಘಾತದಲ್ಲಿ ಮೃತಪಟ್ಟಿವೆ.
ಬಣ್ಣಾರಿ ಮತ್ತು ದಿಂಬಂ ನಡುವೆ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಸಂಚಾರ ನಿರ್ಬಂಧಿಸುವ ಕುರಿತು ಫೆ. 3ಕ್ಕೆ ವರದಿ ಸಲ್ಲಿಸುವಂತೆ ಎನ್ಹೆಚ್ಎ ಪರ ವಕೀಲ ಶ್ರೀನಿವಾಸನ್ ಅವರಿಗೆ ವಿಭಾಗೀಯ ಪೀಠ ಸೂಚಿಸಿತ್ತು. ಆ ವರದಿ ಆಧಾರದಲ್ಲಿ ಕೋರ್ಟ್ ಈ ತೀರ್ಮಾನ ಕೈಗೊಂಡಿದೆ.