ಚಾಮರಾಜನಗರ: ಕೊರೊನಾ ಎರಡನೇ ಅಲೆ, ತಮಿಳುನಾಡು ಹಾಗೂ ಕೇರಳಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್ಗಳ ಮಧ್ಯೆಯೂ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಸಂಚರಿಸುತ್ತಿದ್ದು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಾಗಲಿ, ನಗರಸಭೆಯಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.
ಪ್ರಾರಂಭದಲ್ಲಿದ್ದ ಆತಂಕ ಇದೀಗ ಕಡಿಮೆಯಾಗಿದ್ದು ಡೋಂಟ್ ಕೇರ್ ಮನೋಭಾವ ಪ್ರದರ್ಶನವಾಗುತ್ತಿದೆ. ನಗರಸಭೆ ಅಧಿಕಾರಿಗಳು ಮಾಸ್ಕ್ ಧಾರಣೆ ನಿಯಮದ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿಲ್ಲ. ಬುಧವಾರವಷ್ಟೇ ಜಿಲ್ಲಾಧಿಕಾರಿ ಸಭೆ, ಸಮಾರಂಭಗಳಿಗೆ ಸೀಮಿತ ಸಂಖ್ಯೆಯ ವ್ಯಕ್ತಿಗಳನ್ನು ಸೇರಿಸಬೇಕು, ಅನುಮತಿ ಪಡೆಯಬೇಕೆಂದು ಸೂಚಿಸಿದ್ದು, ಕನಿಷ್ಠ ಮಾಸ್ಕ್ ಅನ್ನೇ ಧರಿಸದ ಜನರು ಡಿಸಿ ನಿಯಮ ಪಾಲಿಸುವರಾ ಎಂಬ ಪರಿಸ್ಥಿತಿ ಇದೆ.