ಕೊಳ್ಳೇಗಾಲ(ಚಾಮರಾಜನಗರ): ಕೊರೊನಾ 3ನೇ ಅಲೆ ಹಿನ್ನೆಲೆ ಐತಿಹಾಸಿಕ ಗಡಿಜಿಲ್ಲೆಯ ಸುಪ್ರಸಿದ್ದ ಚಿಕ್ಕಲ್ಲೂರಿನ ಸಿದ್ದಪ್ಪಾಜಿಯ ಐದು ದಿನಗಳ ಜಾತ್ರೆಗೆ ಧಾರ್ಮಿಕ ವಿಧಿ ವಿಧಾನದಲ್ಲಿ ರಾಜ ಬೊಪ್ಪೇಗೌಡನ ಪುರ ಸಂಸ್ಥಾನ ಮಠದ ಜ್ಞಾನಾನಂದ ಚನ್ನರಾಜೇ ಅರಸ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಜಾತ್ರೆಗೆ ಸೋಮವಾರ ರಾತ್ರಿ ವಿದ್ಯುಕ್ತ ಚಾಲನೆ ನೀಡಿದರು.
ಸಾಂಪ್ರದಾಯಿಕವಾಗಿ ನಡೆದ ಚಿಕ್ಕಲ್ಲೂರು ಜಾತ್ರೆ ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿಯು ಜಿಲ್ಲಾಡಳಿತ ಜಾತ್ರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದೆ. ಈ ಹಿನ್ನೆಲೆ ಪೊಲೀಸರ ಸರ್ಪ ಗಾವಲಿನಲ್ಲಿ ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನದ ಚಂದ್ರಮಂಡಲ ಕಾರ್ಯಕ್ರಮ ಜರುಗಿತು.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಚಿಕ್ಕಲ್ಲೂರು ಜಾತ್ರೆಗೆ ಈ ಬಾರಿ ಭಕ್ತರಿಲ್ಲದೇ ದೇವಾಲಯದ ಆವರಣ ಬಿಕೋ ಎನ್ನುತ್ತಿತ್ತು. ಜಿಲ್ಲಾಡಳಿತ ಪೂಜಾ ಕೈಂಕರ್ಯ ನೆರವೇರಿಸಲು 50 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದ್ದ ಹಿನ್ನೆಲೆ ದೇವಾಲಯ ಆವರಣದ ಪರಿಮಿತಿಗೆ ಸಾರ್ವಜನಿಕರ ಪ್ರವೇಶಕ್ಕೆ ಕಡಿವಾಣ ಹಾಕಲಾಗಿತ್ತು.
ಪವಾಡ ಪುರುಷ ಶ್ರೀಸಿದ್ದಪ್ಪಾಜಿ ಸರಳ ಜಾತ್ರೆ:
ಕಠಿಣ ನಿಯಮ ಪಾಲನೆ ನಡುವೆ ಪವಾಡ ಪುರುಷ ಶ್ರೀಸಿದ್ದಪ್ಪಾಜಿ ಸರಳ ಜಾತ್ರೆ ಪ್ರಾರಂಭವಾಗಿದೆ. ದೇವಾಲಯದ ಮುಂಭಾಗ ಇರುವ ಚಂದ್ರಮಂಡಲ ಕಟ್ಟೆಯಲ್ಲಿ ಸಿದ್ದಪಡಿಸಿದ್ದ ಬಿದಿರಿನಾಕೃತಿಯ ಚಂದ್ರ ಮಂಡಕ್ಕೆ ಬಸವ, ಕಂಡಾಯಗಳು, ಸತ್ತಿಗೆ, ಸುರಾಪಾನಿ, ಜಾಗಟೆ, ತಮಟೆ, ನಗಾರಿ ಮಂಗಳ ವಾದ್ಯಗಳ ಇಮ್ಮೆಳ ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಜ್ಞಾನಾನಂದ ಚನ್ನರಾಜೇ ಅರಸ್ 10 ಗಂಟೆ ಸಮಯದಲ್ಲಿ ಅಗ್ನಿ ಸ್ಪರ್ಶಿಸಿ ಚಾಲನೆ ನೀಡಿದರು.
ಚಿಕ್ಕಲ್ಲೂರು ಜಾತ್ರೆಗೆ ವಿದ್ಯುಕ್ತ ಚಾಲನೆ ದಕ್ಷಿಣ ದಿಕ್ಕಿಗೆ ವಾಲಿದ ಚಂದ್ರಮಂಡಲ:
ಅಗ್ನಿ ಸ್ಪರ್ಶ ಬಳಿಕ ಧಗಧಗನೆ ಹೊತ್ತಿ ಉರಿದ ಚಂದ್ರ ಮಂಡಲ ಜ್ವಾಲೆಯು ದಕ್ಷಿಣ ದಿಕ್ಕಿಗೆ ವಾಲಿ ಉರಿದು ಆಕಾಶಕ್ಕೆ ಮುಖ ಮಾಡಿ ಪ್ರಜ್ವಲಿಸಿದೆ. ಈ ವೇಳೆ, ಮಠದ ಸಿಬ್ಬಂದಿ ಹಾಗೂ ಚಂದ್ರ ಮಂಡಲ ನಿರ್ಮಾಣ ತಂಡ ದವಸ ಧಾನ್ಯ ಹಾಗೂ ಹಣ್ಣು ಮತ್ತು ನಾಣ್ಯಗಳನ್ನು ಮಂಡಲಕ್ಕೆ ಎಸೆದು ಭಕ್ತಿ ಮೆರೆದರು. ಯಾವ ದಿಕ್ಕಿಗೆ ಬಾಗಿ ಚಂದ್ರ ಮಂಡಲ ಜ್ಯೋತಿ ಉರಿಯುತ್ತದೆಯೋ, ಆ ಭಾಗದಲ್ಲಿ ಉತ್ತಮ ಮಳೆ, ಬೆಳೆಯಾಗಿ ಸುಭಿಕ್ಷೆ ಮತ್ತು ಸಮೃದ್ಧಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ಐತಿಹ್ಯ ನಂಬಿಕೆಯಾಗಿದೆ.
ಹೊಲ, ಗದ್ದೆಯಲ್ಲಿ ನಡೆದು ಬಂದ ಭಕ್ತರು:
ಜಾತ್ರೆಗೆ ಸಾರ್ವನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು. ಪೊಲೀಸ್ ಸರ್ಪಗಾವಲು ಕಣ್ಣುತಪ್ಪಿಸಿ ಹೊಲ, ಗದ್ದೆಯ ಕಾಲುದಾರಿ ಮೂಲಕ ದೇವಾಲಯ ಕಡೆಗೆ ಬರುತ್ತಿದಂತೆ ಎಚ್ಚೆತ್ತ ಪೊಲೀಸರು ದೇವಾಲಯದ ಅವರಣಕ್ಕೆ ಭಕ್ತರು ಬರಲು ಅವಕಾಶ ನೀಡಲಿಲ್ಲ. ಹೀಗಾಗಿ ಭಕ್ತರು ದೂರದಲ್ಲೇ ನಿಂತು ಚಂದ್ರ ಮಂಡಲ ವೀಕ್ಷಿಸಿದರು.
ಧಗಧಗನೆ ಹೊತ್ತಿ ಉರಿದ ಚಂದ್ರ ಮಂಡಲ ಜ್ವಾಲೆ ಸೋಮವಾರ(ನಿನ್ನೆ)ದಿಂದ ಆರಂಭವಾದ ಸರಳ ಜಾತ್ರೆ ಐದು ದಿನಗಳ ಕಾಲ ನಡೆಯಲಿದ್ದು, ಚಂದ್ರಮಂಡಲೋತ್ಸವ, ಹುಲಿ ವಾಹನೋತ್ಸವ, ಪಂಕ್ತಿ ಸೇವೆ, ರುದ್ರಾಕ್ಷಿ ಮಂಟಪೋತ್ಸವ(ಮುಡಿಸೇವೆ), ಗಜವಾಹನೋತ್ಸವ ಮುತ್ತುರಾಯರ ಸೇವೆ ಪೂಜಾ ಕೈಂಕರ್ಯ ನೆರವೇರಲಿದೆ.
150 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ:
ಚಂದ್ರಮಂಡಲ ಉತ್ಸವ ಹಿನ್ನೆಲೆ ಡಿವೈಎಸ್ಪಿ ನಾಗರಾಜು ನೇತೃತ್ವದಲ್ಲಿ 150 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ:ವಿಜಯಪುರ: ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಜಾತ್ರೆ