ಚಾಮರಾಜನಗರ :ನಿತ್ಯೋತ್ಸವ ಕವಿ ಎಂದೇ ಹೆಸರಾದ ನಿಸಾರ್ ಅಹಮದ್ ಅವರು ತಾವೇ ಬರೆದ ಕವನವನ್ನು ಮಕ್ಕಳಿಗೆ ಬೋಧಿಸಿ ಅವರ ಮನ ಗೆದ್ದಿದ್ದರು. ಜೊತೆಗೆ ನೀತಿ ಪಾಠವನ್ನು ಬೋಧಿಸಿ ಮಕ್ಕಳೊಂದಿಗೆ ಮಗುವಾಗಿದ್ದರು.
2019ರ ಜನವರಿ 23ರಂದು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನಲ್ಲಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಮಾಡಿದ್ದರು. ಸುತ್ತಲೂ ಮಕ್ಕಳನ್ನು ಕುಳ್ಳಿರಿಸಿಕೊಂಡು ತಾವೇ ರಚಿಸಿದ್ದ ಸ್ವಾತಂತ್ರ್ಯದ ಹಣತೆ ಎಂಬ 5ನೇ ತರಗತಿ ಶಾಲಾ ಪಠ್ಯವನ್ನು ಬೋಧಿಸಿ ಮಕ್ಕಳಿಂದಲೂ ಆ ಪದ್ಯ ವಾಚಿಸಿದ್ದರು.
ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಮಿಸಿದ್ದ ನಿಸಾರ್ ಅಹಮದ್ ಅವರನ್ನು ಶಾಲೆಗೆ ಬರುವಂತೆ ಮನವಿ ಮಾಡಿದ್ದೆ. ಮನವಿ ಪುರಸ್ಕರಿಸಿದ್ದ ನಿಸಾರ್ ಅಹಮದ್ ಶಾಲೆಗೆ ಭೇಟಿಯಿತ್ತು ಕವಿಯೊಬ್ಬರಿಂದ ಕವನ ವಾಚಿಸಿಕೊಂಡು ಪಾಠ ಕೇಳುವ ಭಾಗ್ಯವನ್ನು ಅವರು ಕೊಟ್ಟಿದ್ದರು. ಅದೊಂದು ಅವಿಸ್ಮರಣೀಯ ಕ್ಷಣವೆಂದು ನೆನಪಿಸಿಕೊಳ್ಳುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಅಂಥೋಣಿಯಮ್ಮ.
ಅಂದಿನ ಶಾಲಾ ಭೇಟಿಯಲ್ಲಿ ಕನ್ನಡ ಭಾಷೆ ಜಗತ್ತಿನ ಶ್ರೇಷ್ಠ ಭಾಷೆ, ಅದಕ್ಕೆ ತನ್ನದೆ ಆದ ಇತಿಹಾಸವಿದೆ. ಕನ್ನಡವನ್ನು ಉತ್ತಮವಾಗಿ ಕಲಿಯಿರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ್ದರು. ಕರ್ನಾಟಕದ ಕೊನೆಯ ಗ್ರಾಮದಲ್ಲಿ ಬಂದು ಮಕ್ಕಳ ಜೊತೆಯಲ್ಲಿ ಬೆರೆತಿದ್ದು ಸಂತೋಷವಾಗಿದೆ. ಈ ಸಂತೋಷ ಕೋಟಿ ಕೊಟ್ಟರು ಸಿಗುವುದಿಲ್ಲ. ಮಕ್ಕಳು ವಿಶ್ವಮಾನವರಾಗಿ ಬೆಳೆಯಬೇಕು, ಜಾತಿ ಧರ್ಮದ ಸಂಕೋಲೆಗೆ ಬೀಳಬಾರದು. ವಿದ್ಯೆ, ಸಂಸ್ಕೃತಿ ಮತ್ತು ನಾಗರಿಕತೆಯಿಂದ ವಿಶ್ವಮಾನವ ಗುಣ ಬೆಳೆಯುತ್ತದೆ. ಈ ಗುಣವನ್ನು ಬೆಳೆಸಲು ಶಿಕ್ಷಕರು ಶ್ರಮಿಸಬೇಕು ಎಂದು ನಿಸಾರ್ ಅಹಮದ್ ನೀತಿಪಾಠ ಮಾಡಿದ್ದರು.