ಚಾಮರಾಜನಗರ: ರಾಜಕಾರಣದಲ್ಲಿ ಅಹಂಕಾರ, ದರ್ಪ ವರ್ಕೌಟ್ ಆಗಲ್ಲ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಸನ ಶಾಸಕ ಪ್ರೀತಂ ಗೌಡರಿಗೆ ಟಾಂಗ್ ಕೊಟ್ಟರು. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 50 ಸಾವಿರಕ್ಕಿಂತ ಒಂದು ವೋಟ್ ಕಡಿಮೆ ಬಿದ್ದರೂ ಮರು ಚುನಾವಣೆಗೆ ಹೋಗುತ್ತೇನೆ ಎಂಬ ಪ್ರೀತಂ ಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ನಾವು ಎಷ್ಟು ತಲೆ ಬಗ್ಗಿಸುತ್ತೇವೆ, ಅಷ್ಟು ಜನ ನಮ್ಮನ್ನು ರಾಜಕೀಯವಾಗಿ ಬೆಳೆಸುತ್ತಾರೆ ಎಂದು ತಿರುಗೇಟು ನೀಡಿದರು.
ಹಾಸನ ಜೆಡಿಎಸ್ ಟಿಕೆಟ್ ವಿಚಾರಕ್ಕೆ ಉತ್ತರಿಸಿ, ಸಹಜವಾಗಿ ಎಲ್ಲಿ ಪಕ್ಷ ಬಲಿಷ್ಠವಾಗಿ ಇರುತ್ತದೆಯೋ ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಈ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಶೀಘ್ರದಲ್ಲೇ ಅಂತಿಮ ಮಾಡುತ್ತಾರೆ. ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ ಎಂದರು. ರಾಜಕೀಯವಾಗಿ ಅಪ್ರಬುದ್ಧ ಎಂಬ ಸುಮಲತಾ ಟೀಕೆಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ನಾನು ಚುನಾವಣೆ ಸಂದರ್ಭದಲ್ಲೂ ಕೂಡ ಸುಮಲತಾರನ್ನು ತಾಯಿಯೆಂದು ಕರೆದಿದ್ದೇನೆ. ಲೋಕಸಭೆ ಚುನಾವಣೆಗೆ ತಾಯಿ ವಿರುದ್ಧ ನಿಂತಾಗ ನಂಗೆ ಅನುಭವವಿರಲಿಲ್ಲ. ಅವತ್ತು ತಾಯಿ ಅಂತಾ ಮಾತನಾಡಿಸಿದ್ದೇನೆ, ಇವತ್ತು ಆ ಪದವನ್ನೇ ಬಳಸುತ್ತೇನೆ ಎಂದು ಉತ್ತರಿಸಿದರು.