ಚಾಮರಾಜನಗರ: ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನನಾಥ ಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಹಲ್ಲಿ ಪ್ರಭೇದವನ್ನು ಪತ್ತೆ ಹಚ್ಚಲಾಗಿದೆ.
ಬಿಳಿಗಿರಿರಂಗ ಬೆಟ್ಟದಲ್ಲಿರುವ ಏಟ್ರೀ (ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್) ಸಂಶೋಧಕ ಡಾ. ಎನ್.ಎ.ಅರವಿಂದ್ ಮತ್ತು ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಈ ಹೊಸ ಹಲ್ಲಿ ಪ್ರಭೇದ ಪತ್ತೆ ಹಚ್ಚಿದ್ದಾರೆ. ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಗುರುತಿಸಿದ್ದಾರೆ.
ಬಿಳಿಗಿರಿ ಬನದಲ್ಲಿ ಹೊಸ ಪ್ರಭೇದದ ಹಲ್ಲಿ ಪತ್ತೆ ಪತ್ತೆಯಾದ ಹಲ್ಲಿಯು 2.57 CM ನಷ್ಟು ಉದ್ದವಿದ್ದು, ಗಂಡು ಹಲ್ಲಿಯ ದೇಹ ಕಂದು ಬಣ್ಣದಿಂದಿದ್ದು ಬಾಲ ಕಪ್ಪಾಗಿದೆ. ಹೆಣ್ಣು ಹಲ್ಲಿಯು ಪೂರ್ತಿಯಾಗಿ ಕಂದು ಬಣ್ಣದಿಂದ ಕೂಡಿದೆ. ನಿವೃತ್ತ ಪ್ರಾಧ್ಯಾಪಕರಾದ ಡಾ.ಉಮಾಶಂಕರ್ ಅವರ ಹೆಸರನ್ನು ಹಲ್ಲಿ ಪ್ರಬೇಧಕ್ಕೆ ಸೇರಿಸಿದ್ದು, ಉಮಾಶಂಕರ್ ಕುಬ್ಜ ಹಲ್ಲಿ (Umashankar's dwarf gecko) ಎಂದು ಕರೆಯಲಾಗಿದೆ.
ಬಿಳಿಗಿರಿ ಬನದಲ್ಲಿ ಹೊಸ ಪ್ರಭೇದದ ಹಲ್ಲಿ ಪತ್ತೆ ಇನ್ನು ಹೊಸದಾಗಿ ಪತ್ತೆಯಾಗಿರುವ ಪ್ರಬೇಧವು ರಾತ್ರಿ ಹೊತ್ತು ಹೆಚ್ಚು ಕಾಣಲಿದ್ದು ಕಲ್ಲು, ಬಂಡೆಗಳ ಸಂದಿಗಳು ಇವುಗಳ ಅವಾಸಸ್ಥಾನ ಆಗಲಿದೆ. ಎರಡಕ್ಕಿಂತ ಹೆಚ್ಚು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡಲಿದ್ದು, ಈ ಹಲ್ಲಿಯೂ ಕುಬ್ಜ ಗಾತ್ರದ್ದಾಗಿದೆ, ಬಿಳಿಗಿರಿಬನದಲ್ಲಿ ಮಾತ್ರ ಈ ಹಲ್ಲಿ ಕಂಡುಬರಲಿದೆ ಎಂದು ಅಧ್ಯಯನದಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 289 ಪಕ್ಷಿ ಪ್ರಭೇದ ಪತ್ತೆ!
ಚರ್ಚೆ ಹೊತ್ತಲ್ಲಿ ಗಮನ ಸೆಳೆದ ಆಕಾರ: ಏಟ್ರಿ ಕಚೇರಿಯಲ್ಲಿ ಚರ್ಚೆ ಮಾಡುತ್ತಿರುವಾಗ ಕಂಡುಬಂದ ಹಲ್ಲಿಯು ಗಾತ್ರದಲ್ಲಿ ಚಿಕ್ಕದ್ದಾಗಿದ್ದರಿಂದ ಗಮನ ಸೆಳೆದು ಪರಿಶೀಲನೆ ನಡೆಸಿದಾಗ ಹೊಸ ಪ್ರಭೇದ ಇರಬಹುದು ಎಂದು ಅನುಮಾನ ಬಂದಿದೆ. ಅರಣ್ಯ ಇಲಾಖೆ ಅನುಮತಿ ಪಡೆದು ಉಮಾಶಂಕರ್ ಮತ್ತು ಸೂರ್ಯನಾರಾಯಣನ್ ಸಂಶೋಧನೆ ಕೈಗೊಂಡು ದೇಹ ರಚನೆ ಸೇರಿದಂತೆ ಎಲ್ಲಾ ಪರೀಕ್ಷೆ ನಡೆಸಿ ಹೊಸ ಹಲ್ಲಿ ಪ್ರಭೇದ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಸಂಬಂಧ ಅಂತಾರಾಷ್ಟ್ರೀಯ ನಿಯತಕಾಲಿಕೆಯಾದ ವರ್ಟೆಬ್ರೆಟ್ ಝೂಲಾಜಿಯಲ್ಲಿ ಲೇಖನ ಪ್ರಕಟಗೊಂಡಿದೆ.