ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಬೇರೆ ಜಿಲ್ಲೆಗಳಂತಲ್ಲ. ಖಾಸಗಿ ಆಸ್ಪತ್ರೆಗಳಿಲ್ಲದಿರುವುದರಿಂದ ಚಾಮರಾಜನಗರಕ್ಕೆ ಹೆಚ್ಚಿನ ಸೌಕರ್ಯ ಕಲ್ಪಿಸಬೇಕೆಂದು ಸಿಎಂ ಹಾಗೂ ಆರೋಗ್ಯ ಇಲಾಖೆಗೆ ಪತ್ರ ಬರೆಯುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚಾಮರಾಜನಗರದ ವಿಚಿತ್ರ ಸ್ಥಿತಿ ಏನೆಂದರೆ ಜಿಲ್ಲಾಸ್ಪತ್ರೆ ಬಿಟ್ಟು ದೊಡ್ಡ ಖಾಸಗಿ ಆಸ್ಪತ್ರೆ ಇಲ್ಲ, ಎಲ್ಲರೂ ಜಿಲ್ಲಾಸ್ಪತ್ರೆಗೆ ಬರಬೇಕು. ಕೈ ಮೀರಿದರೇ ಮೈಸೂರಿಗೆ ಹೋಗಬೇಕು.
ಆದ್ದರಿಂದ, ಆಮ್ಲಜನಕ ಹಾಸಿಗೆಗಳನ್ನು ಹೆಚ್ಚು ಮಾಡಬೇಕಿರುವುದರಿಂದ ಹೆಚ್ಚು ಆಮ್ಲಜನಕ, ಮತ್ತಷ್ಟು ಸೌಕರ್ಯಗಳನ್ನು ಕೊಡಬೇಕೆಂದು ಪತ್ರ ಬರೆಯುತ್ತಿರುವುದಾಗಿ ಮಾಹಿತಿ ನೀಡಿದರು.
ಚಾಮರಾಜನಗರಕ್ಕೆ ಹೆಚ್ಚಿನ ಸೌಕರ್ಯ ಕಲ್ಪಿಸಿ: ಸಿಎಂ, ಆರೋಗ್ಯ ಇಲಾಖೆಗೆ ಸಚಿವ ಸುರೇಶ್ ಕುಮಾರ್ ಪತ್ರ ಮೆಡಿಕಲ್ ಕಾಲೇಜಿಗೆ ಆಮ್ಲಜನಕ ಪ್ಲಾಂಟ್ ಬರುತ್ತಿದ್ದು 6 ವಾರಗಳಾಗಲಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 225 ಬೆಡ್ಗೆ ಏರಿಸಲು ಚಿಂತಿಸಲಾಗಿದೆ, ಸದ್ಯಕ್ಕೆ ಆಮ್ಲಜನಕದ ಕೊರತೆ ಇಲ್ಲ ಎಂದು ತಿಳಿಸಿದರು.
ಕೊರೊನಾ ಲಾಕ್‌ಡೌನ್‌ಗೆ ಚಾಮರಾಜನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯಿಸಿ, ಮಗು ಹುಟ್ಟಿದ ದಿನವೇ ಶ್ರದ್ಧಾಂಜಲಿ ಸಲ್ಲಿಸುವುದು ಬೇಡ, ಕಠಿಣ ರೂಲ್ಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದೆ, ಕೊರೊನಾ ಗಾಂಭೀರ್ಯತೆ ಕುರಿತು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಇಂದು ಸಂಜೆ ಟಾಸ್ಕ್ ಫೋರ್ಸ್ ಸಭೆ ನಡೆಸಲಾಗುವುದು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಪರಿಣಿತರು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ, ರಾಜೀವ್ ಗಾಂಧಿ ಆಸ್ಪತ್ರೆ ತಜ್ಞರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ನಡೆಸುವರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.