ಚಾಮರಾಜನಗರ: ಆಟವಾಡುತ್ತಾ ಸ್ನೇಹಿತರು, ಪಾಲಕರ ಜೊತೆ ಅರಳು ಹುರಿದಂತೆ ಮಾತನಾಡಬೇಕಾದ ಪುಟ್ಟ ಬಾಲಕಿಯೊಬ್ಬಳು ವಿಧಿಯಾಟದಿಂದ ಮಾತು, ನಿಲ್ಲುವ ಶಕ್ತಿ ಕಳೆದುಕೊಂಡಿದ್ದಾಳೆ. ಮಗಳ ಸಮಸ್ಯೆ ಬಗೆಹರಿಸಲು ತಂದೆ - ತಾಯಿ ನಿತ್ಯ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಜೊತೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಎಂಬಾಕೆ ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದಾಳೆ. ಸೂಕ್ತ ವೈದ್ಯಕೀಯ ನೆರವು ಸಿಕ್ಕರೆ ಎಲ್ಲರಂತೆ ನಮ್ಮ ಮಗಳು ಕೂಡ ಮಾತನಾಡುತ್ತಾಳೆ ಎಂಬ ನಿರೀಕ್ಷೆಯನ್ನ ಪೋಷಕರು ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಏನು ?: ಮಗು ಜನಿಸಿದ ವೇಳೆ ಮೆದುಳಿಗೆ ಪೆಟ್ಟಾಗಿದ್ದು, ಹುಟ್ಟಿದಾಗಲೂ ಅಳಲಿಲ್ಲವಂತೆ. ಎರಡು ವರ್ಷದ ತನಕ ಕುಳಿತುಕೊಳ್ಳಲು ಶಕ್ತಿ ಇರಲಿಲ್ಲ. ಸತತ ವೈದ್ಯಕೀಯ ಚಿಕಿತ್ಸೆ ಬಳಿಕ ಎರಡು ವರ್ಷಕ್ಕೆ ಮಗು ಕುಳಿತುಕೊಳ್ಳಲು ಆರಂಭಿಸಿದ್ದು, 5ನೇ ವರ್ಷಕ್ಕೆ ಈಗೀಗ ಮಾತು ಆಡಲು ಪ್ರಾರಂಭಿಸಿದ್ದಾಳೆ.