ಚಾಮರಾಜನಗರ:ದೀನಬಂಧು ಶಾಲೆಯ ವಿಜ್ಞಾನ ಸಂಕೀರ್ಣ ಉದ್ಘಾಟನೆಗೆ ಬಂದಿದ್ದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲಾ ಮಕ್ಕಳ ಜೊತೆ ಕುಳಿತು ಬಿಸಿ ಬಿಸಿ ರಾಗಿಮುದ್ದೆ, ಹುರುಳಿ ಸಾರು ಸವಿದಿದ್ದಾರೆ.
ಮಕ್ಕಳ ಜೊತೆ ಕುಳಿತು ಶಿಕ್ಷಣ ಸಚಿವರು ಹಾಗೂ ಶಾಸಕ ಪುಟ್ಟರಂಗಶೆಟ್ಟಿ ಪ್ರಾರ್ಥನೆ ಸಲ್ಲಿಸಿ ಬಳಿಕ ರಾಗಿಮುದ್ದೆ, ಕಾಳಿನ ಪಲ್ಯ, ಹುರುಳಿ ಸಾರು ಸವಿದರು. ಮಕ್ಕಳಿಂದ ಊಟ, ಪಠ್ಯ ಬೋಧನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ವಿಜ್ಞಾನ ಮ್ಯೂಸಿಯಂ ಉದ್ಘಾಟಿಸಿ ಚಿಣ್ಣರಂತೆ ವಿವಿಧ ಫಾರ್ಮುಲಗಳಾದ ಬರ್ನಾಲಿ ತತ್ವ, ಎಡ್ಡಿ ಕರೆಂಟ್, ಉಂಗುರ ನೆಗೆತ, ಬೆಳಕು ಬಳಕು, ತಂತಿ ರಹಿತ ವಿದ್ಯುತ್, ತೇಲುವ ಭ್ರಮೆ, ನಿಶ್ಚಲ ನೆರಳು, ಮೇಲೇರುವ ಕಿಡಿ, ಅನುಕಂಪನ ಜೋಕಾಲಿ, ಹಾವು ಲೋಲಕಗಳು, ಸಂಭವನೀಯ ವಕ್ರತೆ, ಬಲಶಾಲಿ ಕಾಗದ, ಬೆರೆಯದ ದ್ರವಗಳು, ಕಾಂತೀಯ ರೈಲು, ರೈಲು ಹಳಿ ರಚನೆ, ಗುರುತ್ವ ಬಾವಿ ವೀಕ್ಷಿಸಿ ತಾವೇ ಕೆಲವೊಂದನ್ನು ಪ್ರಯೋಗ ನಡೆಸಿದರು. ರುಂಡ-ಮುಂಡ ಬೇರೆಯಾಗುವ ಭ್ರಮಾ ಪ್ರಯೋಗ ನಡೆಸಿ ಸಂತಸ ಪಟ್ಟರು.
ಶಾಲಾ ಮಕ್ಕಳೊಟ್ಟಿಗೆ ಬಿಸಿ-ಬಿಸಿ ಮುದ್ದೆ-ಹುರುಳಿ ಸಾರು ಸವಿದ ಶಿಕ್ಷಣ ಸಚಿವ ನಾಗೇಶ್ ಇದನ್ನೂ ಓದಿ:ಗುಡುಗು-ಸಿಡಿಲು ಇಲ್ಲ ಮಳೆ ಬರುತ್ತದೆ ಎಂಬುದು ಕೇವಲ ನಿರೀಕ್ಷೆ: ಸಿಎಂ ಬದಲಾವಣೆ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ
ನಂತರ ಮಾತನಾಡಿದ ಸಚಿವರು, ಮಕ್ಕಳಿಗೆ ಕಷ್ಟವಾಗುವ ವಿಜ್ಞಾನವನ್ನು ಸುಲಭವಾಗಿ ಕಲಿಸಲು ದೀನ ಬಂಧು ಸಂಸ್ಥೆಯಲ್ಲಿ ಮಾಡಿರುವ ವಿಜ್ಞಾನ ಗ್ಯಾಲರಿ ಅತ್ಯುತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಎನ್‌ಜಿಒಗಳು ಈ ಪ್ರಯತ್ನ ಮಾಡಿವೆ. ಸರ್ಕಾರವು ಎನ್‌ಜಿಒಗಳ ಸಹಕಾರದೊಂದಿಗೆ ಪ್ರತಿ ತಾಲೂಕಿನಲ್ಲಿ ಇಂತಹ ಒಂದೊಂದು ವಿಜ್ಞಾನ ಸಂಕೀರ್ಣವನ್ನು ಸ್ಥಾಪನೆ ಮಾಡಲು ಸಾಧ್ಯವೇ ಎಂಬುದನ್ನು ಚರ್ಚಿಸಲಾಗುವುದು ಎಂದರು.
ಪ‍್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪಿಸುವುದಕ್ಕಾಗಿ ಒಂದೊಂದು ಶಾಲೆಗೆ 20 ಲಕ್ಷ ರೂ. ನೀಡುತ್ತಿದ್ದಾರೆ. ಮಕ್ಕಳು ವಿಜ್ಞಾನವನ್ನು ಪ್ರಯೋಗದ ಮೂಲಕ ಕಲಿತುಕೊಳ್ಳಬೇಕು. ಕೌಶಲ ಬೆಳೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ದೀನ ಬಂಧು ಸಂಸ್ಥೆಯಲ್ಲಿ ಜಯದೇವ ಅವರು ಇದಕ್ಕಿಂತಲೂ ಮೀರಿದ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.