ಚಾಮರಾಜನಗರ :ಮಾಧ್ಯಮಗಳು ಎಲ್ಲಾ ವಿಧದ ವ್ಯಕ್ತಿಗಳನ್ನು, ಸಂದರ್ಭವನ್ನು ಅರಿಯುವ ಕಾರ್ಯ ಮಾಡಬೇಕು. ಬರವಣಿಗೆ ಅತ್ಯಂತ ಸೂಕ್ಷ್ಮವಾಗಿರಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಚಾಮರಾಜನಗರದ ಕೆ ಗುಡಿಯಲ್ಲಿ ನಡೆದ ಬಿಆರ್ಟಿ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಕುರಿತ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಮೇಲೆ ಪ್ರಭಾವ ಬೀರುವ ವಿಚಾರವನ್ನು ಹುಡುಕಿ, ಆವಿಷ್ಕರಿಸುವ ಕಾರ್ಯ ಮಾಡಬೇಕು ಎಂದರು.
ನಾನು ಸಹ ಒಂದು ಎನ್ಜಿಒ ಜತೆ ಸೇರಿ ಹಾಡಿಗಳನ್ನು ಸುತ್ತಿ, ಮಕ್ಕಳ ಚಟುವಟಿಕೆ ಗಮನಿಸಿ ಒಂದು ಪಠ್ಯ ಸಿದ್ಧಪಡಿಸಿದ್ದೆವು. ಇಂಗ್ಲಿಷ್ ಮಾಧ್ಯಮ ಬಂದು ಕನ್ನಡವೇ ಅರ್ಥವಾಗದ ಹಾಡಿ ಜನರಿಗೆ ಇಂಗ್ಲಿಷ್ ಹೇಗೆ ಅರ್ಥವಾಗುತ್ತದೆ? ಸ್ಥಳೀಯವಾಗಿ ಇರುವ ಜ್ಞಾನ, ಅನುಭವವನ್ನು ಬಳಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಸ್ಥಳೀಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಇದರತ್ತ ಮಾಧ್ಯಮಗಳೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ತಂತ್ರಜ್ಞಾನದ ಬಳಕೆ ಈ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಪ್ರಾಣಿ, ಪಕ್ಷಿ ಹಾಗೂ ಅರಣ್ಯ ಜೀವಿಗಳ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗುವ ಸಾಕಷ್ಟು ತಂತ್ರಜ್ಞಾನ ಲಭ್ಯತೆ ಇದೆ. ಆದರೆ, ಇದು ದುಬಾರಿ ಸವಲತ್ತಾಗಿದ್ದು, ಅರಣ್ಯ ಇಲಾಖೆಗೆ ಇದು ಸಿಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದರು.
ಶೇ.75ರಷ್ಟು ಬಯೋ ಡೈವರ್ಸಿಟಿ ಕಳೆದ 30 ವರ್ಷದಲ್ಲಿ ನಾಶವಾಗಿದೆ. ದೊಡ್ಡ ಮಟ್ಟದಲ್ಲಿ ಅರಣ್ಯ ನಾಶ ಆಗುತ್ತಿದೆ. ನಿರ್ಮಾಣ ಪ್ರಮಾಣ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಜನರೇ ಮಾಡಿಕೊಂಡ ಬದಲಾವಣೆಯಿಂದ ಆಗಿದೆ.