ಚಾಮರಾಜನಗರ :ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ನಾಗೇಂದ್ರ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಪೀಠಾಧ್ಯಕ್ಷ ಗುರುಸ್ವಾಮಿಗಳಿಗೆ ಅನಾರೋಗ್ಯ ಹಿನ್ನೆಲೆ ಮತ್ತು ವಿಷ ಪ್ರಸಾದ ದುರಂತದ ಆರೋಪಿಯಾಗಿ ಕಿರಿಯ ಸ್ವಾಮೀಜಿ ಜೈಲಿನಲ್ಲಿರುವುದರಿಂದ ನೂತನ ಮಠಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ನಾಗೇಂದ್ರ ಹಿರಿಯ ಸ್ವಾಮೀಜಿಗಳ ಶಿಷ್ಯ ಎಂದು ತಿಳಿದು ಬಂದಿದೆ. ಸುತ್ತೂರು ದೇಶಿಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗೆ ಕಿರಿಯ ಶ್ರೀಗಳು, ಕನಕಪುರ ದೇಗುಲ ಮಠಾಧ್ಯಕ್ಷರ ಸಮ್ಮುಖದಲ್ಲಿ ಶನಿವಾರ ಇವರ ಪಟ್ಟಾಭಿಷೇಕ ಆಗಲಿದೆ.
ಜೈಲಿನಿಂದ ಹೊರ ಬರುವವರೆಗೆ ನೂತನ ಪೀಠಾಧ್ಯಕ್ಷರ ನೇಮಕ ಮಾಡದಂತೆ ಇಮ್ಮಡಿ ಮಹಾದೇವ ಸ್ವಾಮೀಜಿ ತಡೆಯಾಜ್ಞೆ ತಂದಿದ್ದರು. ಆದರೆ, ಪೀಠಾಧ್ಯಕ್ಷರ ನೇಮಕ ಖಾಸಗಿಯಾಗಿದ್ದರಿಂದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿತ್ತು. ತಡೆಯಾಜ್ಞೆ ತೆರವು ಬೆನ್ನಲ್ಲೆ, ನೂತನ ಮಠಾಧ್ಯಕ್ಷರನ್ನ ಸಾಲೂರು ಬೃಹನ್ಮಠದ ಉತ್ತರಾಧಿಕಾರಿ ಆಯ್ಕೆ ಸಮಿತಿ ನೇಮಕ ಮಾಡಿದೆ.
ನೂತನ ಉತ್ತರಾಧಿಕಾರಿ ಹಿನ್ನೆಲೆ :ಹನೂರು ತಾಲೂಕಿನ ಬಂಡಹಳ್ಳಿ ಗ್ರಾಮದ ಮಹದೇವಸ್ವಾಮಿ ಸುಂದ್ರಮ್ಮ ಪುತ್ರನಾದ ನಾಗೇಂದ್ರ ಅವರು, ಅತ್ಯಂತ ಕಡುಬಡತನ ಹಾಗೂ ಕೃಷಿಕ ಕುಟುಂಬದಲ್ಲಿ ಹುಟ್ಟಿದವರು. ಸಂಸ್ಕೃತ ವೇದ ಶಿಕ್ಷಣ ಸಿದ್ಧಗಂಗಾ ಮಠದಲ್ಲಿ ಆಗಮ, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ, ನೇಪಾಳ ಮತ್ತು ಮಲೇಷಿಯಾದ ಪ್ರಸಿದ್ದ ವಿಶ್ವವಿದ್ಯಾಲಯಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶ್ರೀ ಶರತ್ಚಂದ್ರ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಎಂಫಿಲ್ ಪದವಿ ಮುಗಿಸಿ ಪಿಹೆಚ್ಡಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
ಸಾಲೂರು ಬೃಹನ್ಮಠದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಶ್ರೀ ಮಠದ ಶಿಕ್ಷಣ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದು, ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಸೇರಿ ಅನೇಕ ರಾಜ್ಯಗಳಲ್ಲಿ ಭಾಷಾಶಾಸ್ತ್ರ, ಧರ್ಮ, ಸಾಹಿತ್ಯ-ಸಂಸ್ಕೃತಿಗಳಲ್ಲಿ 10ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ.