ಕರ್ನಾಟಕ

karnataka

ETV Bharat / state

ಇರಲು ಸೂರು, ಖರ್ಚಿಗೆ ದುಡ್ಡು: 2 ದಶಕದಿಂದ ಹಿಂದೂ ವೃದ್ಧೆಗೆ ಮುಸ್ಲಿಂ ಮಹಿಳೆ ಆಸರೆ - ಚಾಮರಾಜನಗರ ಲೇಟೆಸ್ಟ್​ ಅಪ್​ಡೇಟ್​ ನ್ಯೂಸ್​

ಚಾಮರಾಜನಗರ ಗಾಳಿಪುರದ 2ನೇ ವಾರ್ಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿರುವ ಶಹಿದಾ ಬಾನು ಎಂಬವರು ತಮ್ಮ ಮನೆಯ ಪಕ್ಕದಲ್ಲೇ ಇರುವ ಹತ್ತಿರ ಹತ್ತಿರ ನೂರರ ವಯಸ್ಸಿನ ಲಕ್ಷ್ಮೀ ದೇವಮ್ಮ‌ ಎಂಬವರ ಜೀವನಕ್ಕೆ ಊರುಗೋಲಾಗಿದ್ದಾರೆ.

Muslim Woman Helps Hindu Elder woman
ಹಿಂದೂ ವೃದ್ಧೆಗೆ ಮುಸ್ಲಿಂ ಮಹಿಳೆ ನೆರವು

By

Published : Oct 27, 2020, 12:07 PM IST

ಚಾಮರಾಜನಗರ: ಸಹಾಯಹಸ್ತ ಚಾಚಲು ಮನಸ್ಸೊಂದಿದ್ದರೆ ಸಾಕು, ಜಾತಿ-ಧರ್ಮ ಗೌಣ ಎಂಬುದಕ್ಕೆ ಇಲ್ಲಿದೆ ನೋಡಿ ನಿದರ್ಶನ. ಕಳೆದ ಎರಡು ದಶಕಗಳಿಂದ ಹಿಂದೂ ವೃದ್ಧೆಗೆ ಊರುಗೋಲಾಗಿ ನಿಂತಿದ್ದಾರೆ ಈ ಮುಸ್ಲಿಂ ಮಹಿಳೆ.

ಕಳೆದ ಎರಡು ದಶಕದಿಂದ ಹಿಂದೂ ವೃದ್ಧೆಗೆ ಮುಸ್ಲಿಂ ಮಹಿಳೆ ನೆರವು‌

ನಗರದ ಗಾಳಿಪುರದ 2 ನೇ ವಾರ್ಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿರುವ ಶಹಿದಾ ಬಾನು ಎಂಬವರು ತಮ್ಮ ಮನೆಯ ಪಕ್ಕದಲ್ಲೇ ಇರುವ ಹತ್ತಿರ ಹತ್ತಿರ ನೂರರ ವಯಸ್ಸಿನ ಲಕ್ಷ್ಮೀ ದೇವಮ್ಮ‌ ಎಂಬವರಿಗೆ ಊರುಗೋಲಾಗಿದ್ದಾರೆ. ಊಟ, ಆಹಾರ ಪದಾರ್ಥದ ಜೊತೆಗೆ ಆಸ್ಪತ್ರೆ ಖರ್ಚನ್ನೂ ಭರಿಸಿ ತನ್ನ ತಾಯಿಯನ್ನು ಕಂಡಂತೆ ಕಾಣುತ್ತಿದ್ದಾರೆ.

ಲಕ್ಷ್ಮೀದೇವಮ್ಮ‌ ಅವರಿಗೆ ಪತಿವಿಯೋಗವಾಗಿ 30 ವರ್ಷವಾಗಿದ್ದು, ಜೊತೆಯಲ್ಲಿದ್ದ ಒಬ್ಬ ಮಗನನ್ನು ಕಳೆದುಕೊಂಡಿದ್ದಾರೆ‌. ಉಳಿದ ಐವರು ಹೆಣ್ಣು ಮಕ್ಕಳಲ್ಲಿ ಈಗ ಒಬ್ಬರು ಮಾತ್ರ ಬದುಕಿದ್ದಾರೆ. ಲಕ್ಷ್ಮೀ ದೇವಮ್ಮ ಮನೆಪಕ್ಕವೇ ಇದ್ದ ಜಾಗ ಖರೀದಿಸಿ ಮನೆ ಕಟ್ಟಿರುವ ಶಹಿದಾ ಅವರಿಗೆ ಅಜ್ಜಿಯನ್ನು ಕಂಡರೆ‌ ಅಕ್ಕರೆ. ತನ್ನ ಮಗನನ್ನು ಎತ್ತಿ ಆಡಿಸಿದ್ದಾರೆಂಬ ಪ್ರೀತಿಗೆ ಈಗ ಆಸರೆಯಾಗಿದ್ದಾರೆ.

ಸೂರು- ಬೆಳಕು:

ಲಕ್ಷ್ಮೀ ದೇವಮ್ಮ ಇರಲು ಪುಟ್ಟದೊಂದು ಮನೆಯನ್ನು ಕಟ್ಟಿಕೊಟ್ಟಿರುವ ಶಹಿದಾ ಬಾನು ದಂಪತಿ ಸ್ವಂತ ಖರ್ಚಿನಲ್ಲಿ ಮನೆಗೆ ವಿದ್ಯುತ್ ವ್ಯವಸ್ಥೆಯನ್ನು ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಹಾಸಿಗೆ ಹಿಡಿದಾಗ ಅವರ ಸೇವೆಯನ್ನು ಮಾಡಿದ್ದಾರೆ. ಲಕ್ಷ್ಮೀ ದೇವಮ್ಮ ಅವರ ಮಗ ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದರಿಂದ ಎಲ್ಲಾ ಯೋಗಕ್ಷೇಮವನ್ನು ಇವರೇ ನೋಡಿಕೊಂಡಿದ್ದಾರೆ. ಕೊನೆಗೆ, ವೃದ್ಧೆಯ ಮಗ ಸತ್ತಾಗಲೂ ಆತನ ಅಂತ್ಯಕ್ರಿಯೆಗೆ ಹಣಕಾಸಿನ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ತಾನು ಕಷ್ಟದಿಂದಲೇ ಜೀವನ ಕಟ್ಟಿಕೊಂಡವಳು, ಬೇರೆಯವರ ಕಷ್ಟವನ್ನು ಅರಿಯಬಲ್ಲವಳಾದ್ದರಿಂದ ವೃದ್ಧೆಗೆ ಸಹಾಯ ಮಾಡುತ್ತೇನೆ‌‌‌. ಏನಾದರೂ ತಿಂಡಿ, ಮಾಂಸದಡುಗೆ ತಿನ್ನಬೇಕೆಂದರೆ ಕೇಳುತ್ತಾರೆ, ಅದನ್ನು ಮಾಡಿಕೊಡುತ್ತೇನೆ‌‌. ಪಡಿತರ ಬಿಟ್ಟು ಉಳಿದ ಅಡಿಗೆ ವಸ್ತುಗಳನ್ನು ನೀಡುತ್ತಿದ್ದು, ಔಷಧೋಪಚಾರಕ್ಕೆ ನೆರವಾಗುತ್ತೇನೆ ಎಂದು ಶಹಿದಾ ಬಾನು ಈಟಿವಿ ಭಾರತಕ್ಕೆ ತಿಳಿಸಿದರು.

ABOUT THE AUTHOR

...view details