ಚಾಮರಾಜನಗರ : ನಾಲ್ಕು ದಿನಗಳ ಕಂಪ್ಲೀಟ್ ಲಾಕ್ಡೌನ್ ಬಳಿಕ ಇಂದು ನಗರದ ಮದ್ಯದಂಗಡಿಗಳಿಗೆ ಗುಂಡುಪ್ರಿಯರು ಅಕ್ಷರಶಃ ದಾಳಿ ನಡೆಸಿ ತಮ್ಮಿಚ್ಛೆಯ ಬ್ರಾಂಡ್ಗಳ ಸರಕನ್ನು ಪಡೆದು ಯುದ್ಧ ಗೆದ್ದಂತೆ ಬೀಗಿದರು.
ಮದ್ಯದಂಗಡಿ ಮುಂದೆ ಜನಸಂದಣಿ.. ಅಂಗಡಿ ಬಂದ್ ಮಾಡಲು ಸಮಯ ಹತ್ತಿರವಾದಂತೆ ಎಣ್ಣೆ ಕೊಳ್ಳಲು ಒಬ್ಬರ ಮೇಲೋಬ್ಬರು ಬಿದ್ದು ಸಾಮಾಜಿಕ ಅಂತರ ಗಾಳಿಗೆ ತೂರಿದ್ದರಿಂದ ನಗರಸಭೆ ಅಧಿಕಾರಿಗಳು ಮದ್ಯದಂಗಡಿ ಮಾಲೀಕರಿಗೆ ತಲಾ 5000 ರೂ. ನಂತೆ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.
ಹತ್ತಾರು ಮಂದಿ ಜೇನುನೊಣಗಳಂತೆ ಬಾರ್ಗೆ ಮುತ್ತಿಕೊಂಡಿದ್ದನ್ನು ವಿಡಿಯೋ ಮಾಡಿದ ನಗರಸಭೆ ಸಿಬ್ಬಂದಿ ಖಾಸಗಿ ಬಸ್ ನಿಲ್ದಾಣ ಸಮೀಪದ ಎಂಎಸ್ಐಎಲ್ ಅಂಗಡಿ ಹಾಗೂ ಎಲ್ಐಸಿ ರಸ್ತೆಯ ರಾಘವೇಂದ್ರ ವೈನ್ ಸ್ಟೋರಿಗೆ 5000 ರೂ. ದಂಡ ವಿಧಿಸಿದ್ದಾರೆ.
ಬಳಿಕ, ಎಚ್ಚೆತ್ತ ಮದ್ಯದಂಗಡಿ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಹಿವಾಟು ಮುಂದುವರೆಸಿದರು. ಇನ್ನು, ಅಂತರವಿಲ್ಲದೆ ವ್ಯಾಪಾರ ಮಾಡುತ್ತಿದ್ದ ದಿನಸಿ ಅಂಗಡಿಗಳು, ತರಕಾರಿ ಮಾರುಕಟ್ಟೆಯಲ್ಲಿ ದಂಡದ ರುಚಿ ತೋರಿಸಿದ್ದಾರೆ.
ಮದ್ಯದಂಗಡಿಗಳಿಗೆ ಮುತ್ತಿಗೆ ಹಾಕುವ ಗುಂಡುಪ್ರಿಯರಿಗೆ ಎಣ್ಣೆ ಕೊಳ್ಳಲು ಆತುರ ಪಟ್ಟರೆ ಮದ್ಯದಂಗಡಿ ಮಾಲೀಕರುಗಳು ಸಾವಿರಾರು ರೂ. ದಂಡ ಕಟ್ಟಬೇಕಾದ ಗಂಡಾಂತರ ಎದುರಾಗಿದೆ.