ಕೊಳ್ಳೇಗಾಲ(ಚಾಮರಾಜನಗರ):ಸುಸಜ್ಜಿತ ರಸ್ತೆ, ಸಾರಿಗೆ, ಮೂಲ ಸೌಕರ್ಯಗಳು ಸಿಗದೆ ನಿತ್ಯ ಒಂದಲ್ಲ ಒಂದು ಸಂಕಷ್ಟ ಅನುಭವಿಸುವ ಕಾಡಿನ ಜನರಿಗೆ ಅನುಕೂಲವಾಗವಂತೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಯೋಜನೆಯೊಂದನ್ನು ಜಾರಿಗೆ ತಂದಿದೆ. ಗಿರಿ ಜನರಿಗೆ ಬಂದೊದಗುವ ಸಂಕಷ್ಟ ನಿವಾರಿಸಲು 'ಜನ ವನ ಸೇತುವೆ' ಎಂಬ ಮಹತ್ತರವಾದ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಸೋಲಿಗ ಜನ ಜೀವನಕ್ಕೆ ಬಹಳ ಉಪಯೋಗಕಾರಿ.
ಜನ ವನ ಸೇತುವೆ ಎಂದರೆ ಹಲವು ಅವಶ್ಯಕತೆ ಈಡೇರಿಸುವ ವಾಹನ(ಮಲ್ಟಿ ಪರ್ಪಸ್ ವೈಕಲ್). ಕಾಡಿನೊಳಗೆ ಜೀವಿಸುವ ಸೋಲಿಗ ಜನರ ಕಷ್ಟಕ್ಕೆ ಸ್ಪಂದಿಸುವ ಸಂಚಾರ ಸಾರಿಗೆಯಾಗಿದೆ. ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಕಾಡಂಚಿನ ಗ್ರಾಮಗಳಲ್ಲಿ ಈ ವಾಹನ ಕಾರ್ಯನಿರ್ವಹಿಸಲಿದ್ದು, ಸೋಲಿಗ ಜನರ ಸೇವೆಗೆ ನಿಲ್ಲುತ್ತದೆ. ಸಾರಿಗೆ ಸಂಪರ್ಕ ವ್ಯವಸ್ಥೆಯೇ ಇಲ್ಲದ ಗ್ರಾಮಗಳಿಗೆ ನಾಲ್ಕು ಭಾಗಗಳಾಗಿ ವಿಂಗಡಿಸಿ ವಾಹನ ಸೌಲಭ್ಯ ಒದಗಿಸಲಾಗುತ್ತಿದೆ.
ಮುಖ್ಯ ರಸ್ತೆಗಳಿಂದ ಕಾಡಂಚಿನ ಗ್ರಾಮಗಳಿಗೆ ಜನರನ್ನು ಡ್ರಾಪ್, ಪಿಕ್ ಆಪ್ ಮಾಡುವ ಕೆಲಸವನ್ನು ವಾಹನ ನಿರ್ವಹಿಸಲಿದೆ. ಅಲ್ಲದೇ ಪೋಡುಗಳಲ್ಲಿರುವ ಶಾಲೆಗೆ ತೆರಳುವ ಶಿಕ್ಷಕರು, ಪಡಿತರ ಸಾಗಣೆ, ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಂತೆ ಈ ವಾಹನ ನೆರವಾಗಲಿದೆ.