ಚಾಮರಾಜನಗರ: ಸಿದ್ದರಾಮಯ್ಯ ಅಲೆಮಾರಿ ಪ್ರತಿಪಕ್ಷನಾಯಕ, ಕ್ಷೇತ್ರಗಳನ್ನು ಹುಡುಕುವ ನೊಮ್ಯಾಡಿಕ್ ಟ್ರೈಬ್ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕಾರಣ ಮಾಡಲು ಗೊತ್ತಿಲ್ಲದೇ ಸುಮ್ಮನೆ ಬುರುಡೆ ಬಿಡುತ್ತಿದ್ದಾರೆ.
ಮೋದಿ ಮತ್ತು ನೆಹರು ಅವರ ನಡುವೆ ಹೋಲಿಕೆ ಮಾಡುವುದು ಹಾಸ್ಯಾಸ್ಪದ, ನೆಹರು ಅವರನ್ನು ಹೋಲಿಕೆ ಮಾಡುವ ಬದಲು ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಹೋಲಿಕೆ ಮಾಡಲಿ. ಅಮೇಥಿಯಲ್ಲಿ ಗೆಲ್ಲಲಾಗದೇ ರಾಹುಲ್ ಗಾಂಧಿ ವಯನಾಡಿನಲ್ಲಿ ಬಂದು ಗೆದ್ದಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಚಿಂತನಾ ಶಿಬಿರ ನಡೆಸಿ ದೇಶಾದ್ಯಂತ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದಾರೆ. ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡುವ ಬದಲು ಕೈ ಪಡೆ ಅಮೇಥಿಯನ್ನೇ ಸುತ್ತಾಡಲಿ ಎಂದು ಲೇವಡಿ ಮಾಡಿದರು.
ಇದೇ ವೇಳೆ, ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಎಸ್ಎಸ್ ಚಡ್ಡಿಯಿಂದ ಪ್ಯಾಂಟಿಗೆ ಬದಲಾಗಿ ಬಹಳಷ್ಟು ವರ್ಷಗಳೇ ಆಗಿವೆ. ಈಗ ಅವರು ಚಡ್ಡಿ ಹಾಕುತ್ತಿಲ್ಲ, ಚಡ್ಡಿ ಸುಡಬೇಕೆಂದರೆ ಕಾಂಗ್ರೆಸ್ ನವರು ತಮ್ಮ ಚೆಡ್ಡಿಗಳನ್ನೇ ಸುಟ್ಟುಕೊಳ್ಳಬೇಕೆಂದು ಹಾಸ್ಯ ಮಾಡಿದರು.