ಕರ್ನಾಟಕ

karnataka

ETV Bharat / state

ಜಲ ಸಿರಿ..ಬಂಡೀಪುರದಲ್ಲಿ ತುಂಬಿ ತುಳುಕುತ್ತಿವೆ 350ಕ್ಕೂ ಹೆಚ್ಚು ಕೆರೆ - Bandipur lakes

ದೇಶಾದ್ಯಂತ ಆರ್ಭಟ ತೋರಿಸಿದ್ದ ಮಳೆ ಕೆಲವು ದಿನಗಳಿಂದ ಬಿಡುವು ನೀಡಿದೆ. ಆದರೆ, ಜುಲೈ ಅಂತ್ಯ ಹಾಗೂ ಆಗಸ್ಟ್​ನಲ್ಲಿ ಸುರಿದ ಮಳೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ 350ಕ್ಕೂ ಹೆಚ್ಷು ಕೆರೆಗಳು ತುಂಬಿ ತುಳುಕುತ್ತಿದ್ದು, ಕಾಡು ಪ್ರಾಣಿಗಳಿಗೆ ನೀರಿನ ಕೊರತೆ ಬಾಧಿಸದು ಎಂಬ ವಿಶ್ವಾಸ ಅರಣ್ಯ ಇಲಾಖೆಯದ್ದಾಗಿದೆ.

bandipur
ಬಂಡೀಪುರ ಕೆರೆ

By

Published : Aug 19, 2022, 12:37 PM IST

ಚಾಮರಾಜನಗರ: ಜುಲೈ ಅಂತ್ಯ ಹಾಗೂ ಆಗಸ್ಟ್ ವಾರದ ಆರಂಭದಲ್ಲಿ ಕೇರಳ ಮತ್ತು ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ.

ಹೌದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 373 ಕೆರೆಗಳಿದ್ದು, ಇವುಗಳಲ್ಲಿ 350ಕ್ಕೂ ಹೆಚ್ಷು ಕೆರೆಗಳು ತುಂಬಿ ತುಳುಕುತ್ತಿವೆ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು ಮೈದುಂಬಿದೆ. ಪ್ರಾಣಿಗಳಿಗೆ ಮೇವು, ನೀರಿನ ಕೊರತೆ ಬಾಧಿಸದಿರುವುದು ಒಂದೆಡೆಯಾದರೆ ಸಫಾರಿಗರ ಕಣ್ಣಿಗೆ ಹಬ್ಬದ ನೋಟವನ್ನೇ ಕಾಡು ಕಣ್ತುಂಬಿಸುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆರೆ

ಗುಂಡ್ಲುಪೇಟೆ, ಕೇರಳ ಮತ್ತು ತಮಿಳುನಾಡು ಗಡಿಭಾಗದ ಕಾಡಂಚಿನ ಪ್ರದೇಶದಲ್ಲಿ ಸತತವಾಗಿ ಮಳೆಯಾಗಿದ್ದರ ಪರಿಣಾಮ ನೂರಾರು ಕೆರೆಗಳು ಮೈದುಂಬಿದ್ದು, ಕಾಡು ಪ್ರಾಣಿಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಉದ್ಭವಿಸದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ:ಬಂಡೀಪುರದಲ್ಲಿ ಯಂಗ್​ ಟೈಗರ್​.. ಕಾಡಲ್ಲಿ ಪತ್ನಿ ಜೊತೆ ಜೂ.ಎನ್​ಟಿಆರ್ ಫೋಟೋಶೂಟ್

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ತಮಿಳುನಾಡಿನ ಮಧುಮಲೈ, ಕೇರಳದ ವೈನಾಡು ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಸತತವಾಗಿ ಮಳೆಯಾದ್ದರಿಂದ 13 ವಲಯಗಳಲ್ಲಿನ 350 ಕೆರೆಗಳು ಭರ್ತಿಯಾಗಿರುವುದು ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಮಳೆಗಾಲದಲ್ಲಿ ಜಲ ಮೂಲಗಳಿಂದ ತುಂಬುವ ಕೆರೆಗಳು ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ದಾಹ ತೀರಿಸುತ್ತವೆ. ಸದಾ ಕಾಡಿನ ಕೆರೆಗಳಲ್ಲಿ ನೀರು ಇರಬೇಕು, ಪ್ರಾಣಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆಲವೆಡೆ ಸೋಲಾರ್ ಪಂಪ್​ಗಳ ಮೂಲಕವೂ ಕೆರೆಗೆ ನೀರು ತುಂಬಿಸಲಾಗುತ್ತಿತ್ತು. ಆದರೆ, ಈಗಾಗಲೇ ಕೆರೆಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಅಷ್ಟೇನೂ ನೀರಿನ ಕೊರತೆ ಬಾಧಿಸದು ಎಂಬ ವಿಶ್ವಾಸದಲ್ಲಿ ಅರಣ್ಯ ಇಲಾಖೆಯಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಬಂಡೀಪುರ‌ ವಲಯದ ನೀಲಕಂಠರಾವ್ ಕೆರೆ, ಸೊಳ್ಳಿಕಟ್ಟೆ, ತಾವರಗಟ್ಟೆ, ಕುಂದುಕೆರೆ ವಲಯದ ಮಾಲಗಟ್ಟೆ, ಕಡಬೂರುಕಟ್ಟೆ, ದೇವರ ಮಾಡು, ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿ ಕೆರೆ ಕೋಳಚಿಕಟ್ಟೆ, ಹಗ್ಗದಹಳ್ಳದ ಕಟ್ಟೆ ಮುಂತಾದ ಕೆರೆಗಳು ತುಂಬಿವೆ. ಎಲ್ಲ ವಲಯದಲ್ಲಿ ಮಳೆಯಾಗಿರುವುದರಿಂದ ಹಸಿರು ಸಹ ಉತ್ತಮವಾಗಿದ್ದು ಮೇವು ಸಮೃದ್ಧವಾಗಿದೆ. ನುಗು, ಯಡಿಯಲ, ಓಂಕಾರ, ಮೊಳೆಯೂರು ವಲಯದ ಭಾಗದಲ್ಲಿರುವ ಕೆರೆಗಳು ಸಹ ಭರ್ತಿಯಾಗಿದೆ.

ಇದನ್ನೂ ಓದಿ:ಬಂಡೀಪುರದಲ್ಲಿ ಕಾಮಾಲೆಯಿಂದ ಹುಲಿ ಸಾವು: ನಾಗರಹೊಳೆಯಲ್ಲಿ ಮತ್ತೊಂದು ಹುಲಿ ಮೃತದೇಹ ಪತ್ತೆ

ಕಾಡಿನಲ್ಲಿ ಮಳೆ ಕಡಿಮೆಯಾಗಿ ಕೆರೆ ಕಟ್ಟೆಗಳು ತುಂಬದಿದ್ದರೆ ಕಾಡಂಚಿನ ಗ್ರಾಮಗಳ ಜಮೀನು ಮತ್ತು ಗ್ರಾಮಗಳಿಗೆ ಪ್ರಾಣಿಗಳು ದಾಳಿಯಿಟ್ಟು ಮಾನವ ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿತ್ತು‌. ಆದರೆ, ಈಗ ಕಾಡಿನ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದಾಗಿ ಹಸಿರು ಮೈದಳೆದು ನಿಂತಿದೆ. ಸಫಾರಿ ವಲಯದಲ್ಲಂತೂ ಕಾಡು ಹಚ್ಚಹಸಿರು ಹೊದ್ದು ನಿಂತಿದ್ದು ಆನೆ, ಕಾಡೆಮ್ಮೆ, ಜಿಂಕೆಗಳ ಹಿಂಡು ಆಗಾಗ್ಗೆ ಹುಲಿಗಳು ಕಾಣಸಿಗುತ್ತಿದೆ.

ಇದನ್ನೂ ಓದಿ:ಅವಳಿ ಮರಿಗೆ ಜನ್ಮ ನೀಡಿದ ಆನೆ: ಬಂಡೀಪುರ ಕಾಡಲ್ಲಿ ಅಪರೂಪದ ಘಟನೆ

ABOUT THE AUTHOR

...view details