ಚಾಮರಾಜನಗರ: ಸಿದ್ದರಾಮಯ್ಯ ಅವರನ್ನು ಕಂಡರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮಾಡುವ ಕೆಲಸ ಅಷ್ಟಿದೆ. ಆದರೂ ಸಿದ್ದರಾಮಯ್ಯ ಅವರಿಂದಾಗಿ ಮೋದಿ ರಾಜ್ಯಕ್ಕೆ ಓಡೋಡಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಅವರು ನೇರವಾಗಿ, ತೀಕ್ಷ್ಣವಾಗಿ ಬಿಜೆಪಿ ವಿರುದ್ಧ ಮಾತನಾಡುವುದರಿಂದ ಅವರನ್ನು ಕಂಡರೇ ಬಿಜೆಪಿ ಅವರಿಗೆ ನಡುಕ ರಾತ್ರಿನೂ ಸಿದ್ದರಾಮಯ್ಯ ಅವರ ಕನಸು. ಎದ್ದಾಗಲೂ ಸಿದ್ದರಾಮಯ್ಯ ಅವರ ಕನಸು ಕಾಣುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಒಂದು ಕ್ಷೇತ್ರ ಇಲ್ಲವೇ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಅವರಿಗೇ ಬಿಟ್ಟ ವಿಚಾರ. ಆದರೆ, ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೆ ಗೆಲ್ಲುತ್ತಾರೆ. ಬಾದಾಮಿ ಜನರಂತೂ ಅಲ್ಲೇ ನಿಲ್ಲಬೇಕೆಂದು ಬೆನ್ನತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹುಟ್ಟುಗುಣವೇ ಸುಳ್ಳು. ನಾವು ಕೊಟ್ಟಿದ್ದ 165 ಭರವಸೆಗಳನ್ನಷ್ಟೂ ಈಡೇರಿಸಿದ್ದೇವೆ. ಅವರ ಯೋಗ್ಯತೆಗೆ 20ರಿಂದ 30 ಈಡೇರಿಸಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಭಾಗ್ಯಗಳನ್ನೂ ಅವರಿಗೆ ಉಳಿಸಿಕೊಳ್ಳಲಾಗಲಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಬೊಮ್ಮಾಯಿಗೆ ಸವಾಲ್: ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ನಾನು ಸಚಿವನಾಗಿದ್ದ ವೇಳೆ ನನ್ನ ಕಚೇರಿಯಲ್ಲಿ ಹಣ ಸಿಕ್ಕಿತು ಎಂದು ಸಿಎಂ ಹೇಳಿದ್ದಾರೆ. ಅವರೇನಾದರೂ ಬಂದು ನೋಡಿದ್ದರೇ ಎಂದು ಪ್ರಶ್ನಿಸಿದರು. ಸ್ಥಾನದ ಘನತೆ ಅರಿತು ಮಾತನಾಡಬೇಕು. ದಾಖಲಾತಿ ತರಿಸಿಕೊಂಡು ಹಣ ಸಿಕ್ಕಿತೆಂದು ಸಾಬೀತು ಪಡಿಸಲಿ ಎಂದು ಇದೇ ವೇಳೆ ಸವಾಲು ಹಾಕಿದರು.
ಬಿಜೆಪಿ ಹುಟ್ಟಿದ್ದೇ ಸುಳ್ಳಿನಲ್ಲಿ, ಸುಳ್ಳೇ ಬಿಜೆಪಿಯ ತಂದೆ ತಾಯಿ.. ಕಾಂಗ್ರೆಸ್ ಟೀಕೆ: ಬಿಜೆಪಿ ಪಕ್ಷ ಹುಟ್ಟಿದ್ದೇ ಸುಳ್ಳಿನಲ್ಲಿ, ಸುಳ್ಳೇ ಬಿಜೆಪಿಯ ತಂದೆ ತಾಯಿ, ಸುಳ್ಳೇ ಬಿಜೆಪಿಯ ಬಂಧು ಬಳಗ ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಬಿಜೆಪಿ ಪಾಪದ ಪುರಾಣ : ಸುಳ್ಳುಗಳನ್ನು ಅಧಿಕೃತಗೊಳಿಸಲು, ಸುಳ್ಳುಗಳನ್ನು ವ್ಯಾಪಕವಾಗಿ ಹಬ್ಬಿಸಲು ಸಿಟಿ ರವಿ ನೇತೃತ್ವದಲ್ಲಿ ವಾಟ್ಸಾಪ್ ಯೂನಿವರ್ಸಿಟಿ ಸ್ಥಾಪನೆ ಮಾಡುವುದು ಬಿಜೆಪಿ ಪ್ರಣಾಳಿಕೆ, ಭರವಸೆ ಆಗಬಹುದು. ಬಿಜೆಪಿ ಜನತೆಗೆ ಬೆಲೆ ಏರಿಕೆಯನ್ನಲ್ಲದೆ ಬೇರೇನು ಕೊಡಬಲ್ಲದು. ಜನಾಭಿಪ್ರಾಯದಿಂದಂತೂ ಅಧಿಕಾರಕ್ಕೆ ಬರುವುದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿದ್ದೇ ಆದರೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಇನ್ನಷ್ಟು ಏರಿಸುವುದೇ ಬಿಜೆಪಿ ಅಜೆಂಡವಾಗಿರುತ್ತದೆ ಎಂದು ಬಿಜೆಪಿ ಪಾಪದಪುರಾಣ ಎಂಬ ಹ್ಯಾಷ್ ಟ್ಯಾಗ್ ಮೂಲಕ ವಾಗ್ದಾಳಿ ನಡೆಸಿದೆ.