ಚಾಮರಾಜನಗರ:ಧರ್ಮ, ಜಾತಿ, ವಯಸ್ಸು, ಸಂಬಂಧ ಮೀರಿದ ಬಂಧ ಒಂದಿದ್ದರೇ ಅದು ಗೆಳೆತನ ಮಾತ್ರ. ಇದಕ್ಕೆ ನಿದರ್ಶನ ಎಂಬಂತೆ ಅಪರೂಪ ಹಾಗೂ ಮಾದರಿ ಮದುವೆಯೊಂದು ನಡೆದಿದ್ದು, ಸ್ನೇಹಿತನ ಮಡದಿಗೆ ಗೆಳೆಯ ಬಾಳು ಕೊಟ್ಟ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್ ಎಂಬುವರು ಗೆಳೆಯನ ಪತ್ನಿಯನ್ನು ಮದುವೆಯಾಗುವ ಮೂಲಕ ಪತಿ ಕಳೆದುಕೊಂಡು ಕಂಗಾಲಾಗಿದ್ದಾಕೆಯ ಬಾಳಿಗೆ ಬೆಳಕಾಗಿದ್ದಾರೆ. ಜ. 27ರಂದು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಈ ಆದರ್ಶ ಮದುವೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಕಲ್ಯಾಣ-ಏನಿದು ಗೆಳೆತನ: ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಚೇತನ್‌ಕುಮಾರ್ (41) ಮತ್ತು ಹನೂರು ಪಟ್ಟಣದ ಅಂಬಿಕಾ (30) 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಚೇತನ್‌ಕುಮಾರ್ ಅವರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಚೇತನ್‌ಕುಮಾರ್ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.