ಚಾಮರಾಜನಗರ: ನಮ್ಮ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲೇ ಮಾದರಿ ಆಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಚಾಮರಾಜನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಪಂಚದಲ್ಲೇ ಯಾವುದೇ ಸರ್ಕಾರಗಳು ನೀಡದ 5 ಗ್ಯಾರಂಟಿ ಯೋಜನೆಗಳನ್ನು ನಾವು ನೀಡಿದ್ದೇವೆ. ಎಲ್ಲವೂ ಕೂಡ ಸಾಮಾನ್ಯ ಜನರಿಗೆ, ನೈಜ ಫಲಾನುಭವಿಗಳಿಗೆ ತಲುಪುವ ಯೋಜನೆಗಳು, ನಾವು ಅಂಬಾನಿ - ಅದಾನಿಗೆ ಕೊಡುತ್ತಿಲ್ಲ, ತಿಮ್ಮಣ್ಣ-ಬೊಮ್ಮಣ್ಣಗೆ ಕೊಡುತ್ತಿದ್ದೇವೆ ಎಂದು ಹೇಳಿದರು.
ನಮ್ಮದು ಪರ್ಸೇಂಟೇಜ್ ಇಲ್ಲದ ಯೋಜನೆಗಳು, ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ, ಒಂದು ಕುಟುಂಬಕ್ಕೆ ಏನಿಲ್ಲವೆಂದರೂ ತಿಂಗಳಿಗೆ 4-5 ಸಾವಿರ ಹಣ ಜಮೆಯಾಗುತ್ತಿದೆ, ನೊಬೆಲ್ ಪ್ರಶಸ್ತಿ ಪುರಸ್ಕೃತರು ನಮ್ಮ ಸರ್ಕಾರದ ಯೋಜನೆಗಳನ್ನು ಅಧ್ಯಯನ ಮಾಡಲು ಬರುತ್ತಿದ್ದಾರೆ ಎಂದರು.
ಇಂಡಿಯಾ ಒಕ್ಕೂಟಕ್ಕೆ ಒಲವು: ಕರ್ನಾಟಕದಲ್ಲಿ ಕಾಂಗ್ರೆಸ್ನ ಅಭೂತಪೂರ್ವ ಯಶಸ್ಸು ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಎಲ್ಲ ಸಾಧ್ಯತೆ ಎದ್ದು ಕಾಣುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪರ ಜನರ ನಿಲುವು ವ್ಯಕ್ತವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮ ಯೋಜನೆಗಳು ಜನರ ಬಳಿ ಹೋಗಿವೆ. ಆದರೆ, ಕೊಟ್ಟದ್ದು ಕಾಂಗ್ರೆಸ್ ಎಂಬುದು ಜನರಿಗೆ ತಿಳಿಯಬೇಕು. ಲೋಕಸಭಾ ಚುನಾವಣೆಯಲ್ಲಿ ನಾವು ಉತ್ತಮ ಫಲಿತಾಂಶ ಪಡೆಯಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.