ಚಾಮರಾಜನಗರ: ಆಕ್ಸಿಜನ್ ದುರಂತಕ್ಕೆ ಎರಡು ತಿಂಗಳುಗಳಾಗುತ್ತಿದೆ. ಆದ್ರೆ, ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಸಿಎಂ ಯಡಿಯೂರಪ್ಪರ ನಡೆಯ ವಿರುದ್ಧ ಶಾಸಕ ಸಿ. ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದರು. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಎರಡು ತಿಂಗಳುಗಳಾದರೂ ಸರ್ಕಾರ ಈವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ದುರಂತದ ಸಾವುಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ಉದಾಸೀನ ಪ್ರದರ್ಶಿಸುತ್ತಿರುವ ರಾಜ್ಯ ಸರ್ಕಾರ ಒಂದು ರೀತಿ ಜನರಿಗೆ ದ್ರೋಹ ಬಗೆಯುವಂತಿದೆ ಎಂದು ಕಿಡಿಕಾರಿದರು.
ಆರಂಭದಲ್ಲಿ ಮೂವರಷ್ಟೇ ದುರಂತದಲ್ಲಿ ಸತ್ತಿದ್ದಾರೆ ಎಂದರು. ಬಳಿಕ 24 ಜನಕ್ಕೆ ಪರಿಹಾರ ಕೊಟ್ಟಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಡೆತ್ ಸರ್ಟಿಫಿಕೇಟ್ ಕೊಡುತ್ತಿಲ್ಲ. ನಾವು ಪ್ರತಿಭಟಿಸಿದರೆ ಕೊರೊನಾ ಕಾಲದಲ್ಲಿ ರಾಜಕೀಯ ಮಾಡುತ್ತಾರೆ ಎನ್ನುತ್ತಾರೆ. ಕನಿಷ್ಠ 10 ಲಕ್ಷ ರೂಪಾಯಿಯನ್ನಾದರೂ 36 ಕುಟುಂಬಗಳಿಗೆ ನೀಡಬೇಕೆಂದು ಆಗ್ರಹಿಸಿದರು.
ಸಚಿವರುಗಳು ಬಾಡಿಗೆ ಸಿಪಾಯಿಗಳು :ಇಷ್ಟು ದೊಡ್ಡ ದುರಂತ ನಡೆದರೂ ಮೂಢನಂಬಿಕೆಗೆ ಕಟ್ಟುಬಿದ್ದು ಸಿಎಂ ಚಾಮರಾಜನಗರಕ್ಕೆ ಬಂದಿಲ್ಲ. ಬಾಡಿಗೆ ಸಿಪಾಯಿಗಳು ದೇಶ ಕಾಯದ ಹಾಗೇ ಸಚಿವರುಗಳು ಬಾಡಿಗೆ ಸಿಪಾಯಿಗಳು, ಇವರು ಕೊಟ್ಟ ವರದಿಯನ್ನೇ ಅವರು ನೋಡಬೇಕು, ಮುಖ್ಯಮಂತ್ರಿಯಾದವರು ಜಿಲ್ಲೆಗೆ ಬಂದರೆ ವಸ್ತುಸ್ಥಿತಿ ಅರ್ಥವಾಗಲಿದೆ ಎಂದರು.